ಕಳ್ಳ ಗೋಣಿ ಚೀಲ ಎಳೆದುಕೊಂಡು ಹೋಗುತ್ತಿರುವುದು. 
ದಕ್ಷಿಣ ಕನ್ನಡ

ದಿನಸಿ ಅಂಗಡಿಯಲ್ಲಿ ಬೆಳ್ಳುಳ್ಳಿ ಗೋಣಿ ಕದಿಯಲು ವಿಫಲ ಯತ್ನ

ಉಪ್ಪಿನಂಗಡಿಯಲ್ಲಿ ಗಾಡಿಗೆ ಹೇರದೆ ತಿರುಗಿದ ಕಳ್ಳ

ಉಪ್ಪಿನಂಗಡಿ: ಇಲ್ಲಿನ ಜನಪ್ರಿಯ ದಿನಸಿ ಅಂಗಡಿಯೊಂದಕ್ಕೆ ಕಳ್ಳನೋರ್ವ ನುಗ್ಗಿ ಒಂದು ಗೋಣಿ ಬೆಳ್ಳುಳ್ಳಿ ಕದಿಯಲು ಯತ್ನಿಸಿದ ಘಟನೆ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಗೋಣಿ ಹೊರಗೆ ತಂದಿಟ್ಟರೂ ಗಾಡಿಗೆ ಹೇರದೆ ತಿರುಗುತ್ತಿದ್ದ ಕಳ್ಳನನ್ನು ಅಂಗಡಿ ಮಾಲೀಕರು ನಂಬುವ ದೈವವೇ ಮಂಕು ಮಾಡಿದೆ ಎಂದು ಸ್ಥಳೀಯರು ಮಾತನಾಡಿಕೊಳ್ಳುತ್ತಿದ್ದಾರೆ.

ರಾತ್ರಿ 2.30ರ ಸುಮಾರಿಗೆ ಅಂಗಡಿಯೊಳಗೆ ನುಗ್ಗಿದ ಕಳ್ಳ ಸಾವಕಾಶವಾಗಿ ಅಂಗಡಿಯೊಳಗಿನ ವಸ್ತುಗಳನ್ನು ಪರಿಶೀಲಿಸುತ್ತಾ ಕಟ್ಟಕಡೆಗೆ ಬೆಳ್ಳುಳ್ಳಿ ಗೋಣಿ ಕದಿಯಲು ಆಯ್ಕೆ ಮಾಡಿದ್ದ. ಬೆಳ್ಳುಳ್ಳಿ ಗೋಣಿಯನ್ನು ಬೇರೊಂದು ಸೆಣಬಿನ ಗೋಣಿಗೆ ಹಾಕಿ ಸುತ್ತಮುತ್ತ ನೋಡಿದಾಗ ಅಲ್ಲಿ ಸಿಸಿ ಕ್ಯಾಮರಾ ಇರುವುದನ್ನು ಗಮನಿಸಿದ್ದಾನೆ. ಕೂಡಲೆ ಉಟ್ಟಿದ್ದ ಲುಂಗಿ ತೆಗೆದು ಮುಖ ತಲೆ ಮರೆಮಾಚುವಂತೆ ಧರಿಸಿ ಗೋಣಿ ಚೀಲ ಎಳೆದುಕೊಂಡು ಹೋಗಿ ಸನಿಹದಲ್ಲೇ ನಿಲ್ಲಿಸಲಾಗಿದ್ದ ವಾಹನದ ಹಿಂಭಾಗಕ್ಕೆ ಕೊಂಡೊಯ್ದಿದ್ದಾನೆ. ನಾಲ್ಕೈದು ನಿಮಿಷ ಗೋಣಿ ಚೀಲದ ಸುತ್ತಮತ್ತ ಅಲೆದಾಡಿದರೂ ಗೋಣಿ ಅಲ್ಲೇ ಬಿಟ್ಟು ನಿರ್ಗಮಿಸಿದ್ದಾನೆ.

ಸದಾ ಗ್ರಾಹಕರಿಂದ ತುಂಬಿರುವ ಈ ಅಂಗಡಿಯಲ್ಲಿ ಗ್ರಾಹಕರ ಸೋಗಿನಲ್ಲಿ ಬರುವ ಮಂದಿ ಯಾವುದಾದರೂ ವಸ್ತು ಕದ್ದೊಯ್ದರೂ, ಬಳಿಕ ಅವರ ಬದುಕಿನಲ್ಲಿ ಅಹಿತಕರ ಪ್ರಸಂಗ ನಡೆದು ಭಯದಿಂದ ಕದ್ದ ವಸ್ತುವಿನ ಮೌಲ್ಯ ತಂದೊಪ್ಪಿಸಿರುವ ಪ್ರಕರಣ ನಡೆದಿದೆ ಎಂದು ಮಾಲೀಕರು ತಿಳಿಸುತ್ತಾರೆ. ಈ ಪ್ರಕರಣದಲ್ಲೂ ದೈವದ ಪಾತ್ರ ಇದೆ ಎಂದು ಅಂಗಡಿ ಮಾಲೀಕರು ಅಭಿಪ್ರಾಯಪಟ್ಟಿದ್ದಾರೆ.

ಅರಿವಿಗೆ ಬಾರದ ಕೃತ್ಯ

ಕೃತ್ಯ ಘಟಿಸಿದ ಅಂಗಡಿ ಉಪ್ಪಿನಂಗಡಿಯ ಪ್ರಮುಖ ಬೀದಿಯಲ್ಲಿದ್ದು, ರಾತ್ರಿ ವೇಳೆ ಈತ ಈ ಅಂಗಡಿಗೆ ಪ್ರವೇಶಿಸುವ ಮುನ್ನಾ ಯಾವುದಾದರೂ ಬೀದಿಯಿಂದ ಬರಲೇಬೇಕಾಗಿದೆ. ಬೀದಿಗಳ ಅಯಕಟ್ಟಿನಲ್ಲಿ ಪೊಲೀಸ್ ಇಲಾಖೆ ಸಿಸಿ ಕ್ಯಾಮರಾ ಅಳವಡಿಸಿದೆ. ರಾತ್ರಿ ಪೊಲೀಸರ ಗಸ್ತು ಇದೆ. ಸಾಲದಕ್ಕೆ ಗೂರ್ಖರೂ ಸಂಚರಿಸುತ್ತಿರುತ್ತಾರೆ. ಇಷ್ಟೆಲ್ಲ ಇದ್ದರೂ ಕಳ್ಳನ ಆಗಮನ-ನಿರ್ಗಮನ ಯಾರ ಗಮನಕ್ಕೂ ಬಂದಿಲ್ಲ ಎನ್ನುವುದು ವಿಶೇಷ.