ಸ್ಫೋಟಕ ಸಿಡಿದ ರಾಮಕುಂಜ ಗ್ರಾಮದ ಕಂಪದಲ್ಲಿ ಬಾಂಬ್ ನಿಷ್ಕ್ರಿಯ ದಳದಿಂದ ಕಾರ್ಯಾಚರಣೆ ನಡೆಯಿತು.
ಕಡಬ: ರಾಮಕುಂಜ ಗ್ರಾಮದ ಕಂಪ ಎಂಬಲ್ಲಿ ಬಾವಿ ತೋಡುವ ಸಂದರ್ಭ ಸ್ಫೋಟಕ ಬಳಕೆ ಮಾಡಿದ್ದರಿಂದ ಸಮೀಪದ ಮನೆಗಳಿಗೆ ಹಾನಿಯಾಗಿದೆ. ಸ್ಫೋಟವಾಗದೆ ಬಾವಿಯೊಳಗೆ ಉಳಿದಿರುವ ಸ್ಫೋಟಕಗಳನ್ನು ತೆರವುಗೊಳಿಸಲು ಬಾಂಬ್ ನಿಷ್ಕ್ರಿಯ ದಳದಿಂದ ಕಾರ್ಯಾಚರಣೆ ನಡೆಯುತ್ತಿದೆ.
ಮೈಸೂರು ನಿವಾಸಿ ಸೋಮಶೇಖರ ಎಂಬುವರು ಸಂಬಂಧಿಕರಿಂದ ಅಡಕೆ ಮರಗಳಿರುವ 23 ಸೆಂಟ್ಸ್ ಜಾಗ ಖರೀದಿಸಿದ್ದರು. ಈ ಜಾಗದಲ್ಲಿ ಬಾವಿ ತೋಡಿದ್ದು, ಸುಮಾರು 15 ಅಡಿ ಆಳದಲ್ಲಿ ಕಲ್ಲು ಸಿಕ್ಕಿದ ಹಿನ್ನೆಲೆಯಲ್ಲಿ ಸ್ಫೋಟಕ ಬಳಸಲಾಗಿತ್ತು. ಭಾನುವಾರ ಸ್ಫೋಟಕ ಸಿಡಿಸಿದ್ದರಿಂದ ಸಮೀಪದ ವಾಮನ ಮೂಲ್ಯ, ಕೆ.ಟಿ.ಮೋಹನ ಎಂಬುವರ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಈ ಬಗ್ಗೆ ಅವರು ಕಡಬ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಕಡಬ ಠಾಣೆ ಸಬ್‌ಇನ್‌ಸ್ಪೆಕ್ಟರ್ ಜಂಬೂರಾಜ್ ಮಹಾಜನ್ ಪ್ರಕರಣ ದಾಖಲಿಸಿದ್ದಾರೆ.
ಈ ಮಧ್ಯೆ ಬಾವಿಯೊಳಗೆ ಸ್ಫೋಟವಾಗದೆ ಉಳಿದುಕೊಂಡಿದ್ದ ಸ್ಫೋಟಕ ತೆರವುಗೊಳಿಸಲು ಮಂಗಳವಾರ ಬಾಂಬ್ ನಿಷ್ಕ್ರಿಯ ದಳ ಸಿಬ್ಬಂದಿ ಆಗಮಿಸಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿ, ಕಡಬ ಎಸ್‌ಐ ಜಂಬೂರಾಜ್ ಮಹಾಜನ್, ಎಫ್‌ಎಸ್‌ಎಲ್ ತಂಡದವರು ಸ್ಥಳದಲ್ಲಿದ್ದರು.