ಪುರುಷೋತ್ತಮ ಪೆರ್ಲ ಕಾಸರಗೋಡು
ನಗರದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಟ್ರಾಫಿಕ್ ಜಾಮ್ ಖಾಸಗಿ ಬಸ್‌ಗಳ ಪಾಲಿಗೆ ಸಂಕಷ್ಟ ತಂದೊಡ್ಡಿದೆ. ಅವೈಜ್ಞಾನಿಕ ಸಂಚಾರ ವ್ಯವಸ್ಥೆ, ಅನಧಿಕೃತ ಬೀದಿಬದಿ ವ್ಯಾಪಾರಿಗಳು, ರಸ್ತೆಯಲ್ಲೇ ಪಾರ್ಕಿಂಗ್‌ನಿಂದ ಕಾಸರಗೋಡು ನಗರದಲ್ಲಿ ವಾಹನ ಚಾಲಕರಿಗೆ ಉಸಿರುಗಟ್ಟಿಸುವ ಸ್ಥಿತಿ ನಿರ್ಮಾಣವಾಗಿದೆ.
ಕಾಸರಗೋಡು ಹೊಸ ಬಸ್ ನಿಲ್ದಾಣದ ಸರ್ಕಲ್ ಮೂಲಕ ಎಂ.ಜಿ.ರಸ್ತೆಗೆ ಸಂಚರಿಸುವ ವಾಹನ ಸವಾರರು ಅಲ್ಲಿಂದ ಮುಂದೆ ಪ್ರೆಸ್‌ಕ್ಲಬ್ ಜಂಕ್ಷನ್, ಜನರಲ್ ಆಸ್ಪತ್ರೆ ರಸ್ತೆ, ಹಳೇ ಬಸ್ ನಿಲ್ದಾಣ, ಮಾರ್ಕೆಟ್ ರಸ್ತೆ, ರೈಲ್ವೆ ನಿಲ್ದಾಣ ತೆರಳುವ ರಸ್ತೆಯ ಸರ್ಕಲ್, ಮಲ್ಲಿಕಾರ್ಜುನ ದೇವಸ್ಥಾನ ಎದುರಿನ ಬ್ಯಾಂಕ್ ರಸ್ತೆಯಲ್ಲಿ ಉಂಟಾಗುವ ಸಂಪೂರ್ಣ ಟ್ರಾಫಿಕ್ ಜಾಮ್‌ನಿಂದ ಕಂಗೆಟ್ಟು ಹೋಗುತ್ತಿದ್ದಾರೆ.
ಸಂಪೂರ್ಣ ಹದಗೆಟ್ಟ ಸಂಚಾರ ವ್ಯವಸ್ಥೆ: ಕಾಸರಗೋಡು ನಗರಸಭೆಯ ಅವೈಜ್ಞಾನಿಕ ಸಂಚಾರ ನಿಯಮ ಪರಿಷ್ಕರಣೆ ಹಾಗೂ ಟ್ರಾಫಿಕ್ ನಿಯಂತ್ರಿಸಬೇಕಾದ ಕಾಸರಗೋಡು ಟ್ರಾಫಿಕ್ ಪೊಲೀಸರ ನಿರ್ಲಕ್ಷೃ ಧೋರಣೆಯಿಂದ ಕಾಸರಗೋಡು ನಗರದ ಸಂಚಾರ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಹಳೇ ಬಸ್ ನಿಲ್ದಾಣದಲ್ಲಿ ಸಮಸ್ಯೆಗೆ ಕಾರಣವಾಗುತ್ತಿದ್ದ 25ಕ್ಕೂ ಹೆಚ್ಚು ಬೀದಿಬದಿ ವ್ಯಾಪಾರಿಗಳನ್ನು ಹೊಸ ಬಸ್ ನಿಲ್ದಾಣದಲ್ಲಿ ನಗರಸಭೆ ನಿರ್ಮಿಸಿಕೊಟ್ಟಿದ್ದ ಶೆಡ್‌ಗಳಿಗೆ ಸ್ಥಳಾಂತರಿಸಲಾಗಿದೆ. ಆದರೆ ಇವರಲ್ಲಿ ಬಹುತೇಕ ಮಂದಿ ಮತ್ತೆ ಹಳೇ ಬಸ್ ನಿಲ್ದಾಣದ ಬೀದಿಯಲ್ಲೇ ತಮ್ಮ ವ್ಯಾಪಾರ ಮುಂದುವರಿಸಿದ್ದಾರೆ. ಇನ್ನು ಸರಕುಗಳನ್ನು ಇಳಿಸಲು ಗೂಡ್ಸ್ ವಾಹನಗಳನ್ನು ರಸ್ತೆಯಲ್ಲೇ ನಿಲ್ಲಿಸಲಾಗುತ್ತಿದ್ದು, ಇದೂ ಟ್ರಾಫಿಕ್ ಸಮಸ್ಯೆ ಹೆಚ್ಚಲು ಕಾರಣವಾಗುತ್ತಿದೆ. ವಾಹನ ದಟ್ಟಣೆ ಹೆಚ್ಚಾಗಿರುವ ಹಳೇ ಬಸ್ ನಿಲ್ದಾಣದ ರಸ್ತೆ ಬದಿ ದ್ವಿಚಕ್ರ ವಾಹನ ಪಾರ್ಕಿಂಗ್‌ಗೆ ಅನುಮತಿ ನೀಡಿರುವುದು ಅಧಿಕಾರಿಗಳ ಅವೈಜ್ಞಾನಿಕತೆಗೆ ಸಾಕ್ಷಿಯಾಗಿದೆ. ಈಗಾಗಲೇ ಫುಟ್‌ಪಾತನ್ನು ಸಂಪೂರ್ಣ ಬೀದಿಬದಿ ವ್ಯಾಪಾರಿಗಳು ಆಕ್ರಮಿಸಿಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಕಾಸರಗೋಡು ನಗರದಲ್ಲಿ ಹೆಚ್ಚುತ್ತಿರುವ ಸಂಚಾರ ದಟ್ಟಣೆ ಸಮಸ್ಯೆ ನಿಯಂತ್ರಿಸಲು ಸಂಬಂಧಪಟ್ಟ ಇಲಾಖೆ ಶೀಘ್ರವೇ ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ.
ನಗರದ ಟ್ರಾಫಿಕ್ ಜಾಮ್ ಜಂಜಾಟದಿಂದ ಖಾಸಗಿ ಬಸ್ ಚಾಲಕರು ಅತೀ ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ. ಹೊಸ ಬಸ್ ನಿಲ್ದಾಣದಿಂದ ಹಳೇ ಬಸ್ ನಿಲ್ದಾಣಕ್ಕೆ ಪ್ರತಿ ಖಾಸಗಿ ಬಸ್‌ಗಳು ಹೋಗುವುದು ಕಡ್ಡಾಯವಾಗಿದೆ. ಕೇವಲ ಹತ್ತು ನಿಮಿಷದ ಹಾದಿಯ ಹಳೇ ಬಸ್ ನಿಲ್ದಾಣಕ್ಕೆ ತೆರಳಿ ಬ್ಯಾಂಕ್ ರಸ್ತೆ, ಕರಂದಕ್ಕಾಡು, ಅಶ್ವಿನಿನಗರ ಮೂಲಕ ಮತ್ತೆ ಹೊಸ ಬಸ್ ನಿಲ್ದಾಣ ಬರಬೇಕು. ಆದರೆ ಈ ಮಾರ್ಗದಲ್ಲಿ ಎದುರಾಗುವ ಭಾರಿ ಟ್ರಾಫಿಕ್ ಜಾಮ್‌ನಿಂದಾಗಿ ಖಾಸಗಿ ಬಸ್ ಚಾಲಕರು ಹೈರಾಣಾಗುತ್ತಿದ್ದು ವೇಳಾಪಟ್ಟಿ ಹೊಂದಿಸಲಾಗದೆ ಕಂಗಾಲಾಗಿದ್ದಾರೆ.
ನಗರದ ಅವೈಜ್ಞಾನಿಕ ಸಂಚಾರಿ ವ್ಯವಸ್ಥೆಯ ವಿರುದ್ಧ ಕೇರಳ ರಾಜ್ಯ ಖಾಸಗಿ ಬಸ್ ಆಪರೇಟರ್ಸ್ ಫೆಡರೇಶನ್ ತಮ್ಮ ವಿರೋಧ ಸೂಚಿಸಿದ್ದು, ನಗರದಲ್ಲಿನ ಸಂಚಾರಿ ವ್ಯವಸ್ಥೆಯನ್ನು ಅ.10ರೊಳಗೆ ಸರಿಪಡಿಸದಿದ್ದಲ್ಲಿ ಹೋರಾಟದ ಎಚ್ಚರಿಕೆ ನೀಡಿದೆ. ನಗರದ ಸಂಚಾರಿ ವ್ಯವಸ್ಥೆ ಸರಿಪಡಿಸುವಂತೆ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ, ನಗರಸಭೆಗೆ ಈಗಾಗಲೇ ಮನವಿ ಸಲ್ಲಿಸಿದ್ದರೂ ಸೂಕ್ತ ಪರಿಹಾರ ಕಲ್ಪಿಸಿಲ್ಲ. ಸಮಸ್ಯೆ ಪರಿಹರಿಸದಿದ್ದಲ್ಲಿ ಅ.10ರಿಂದ ಖಾಸಗಿ ಬಸ್‌ಗಳು ಹಳೇ ಬಸ್ ನಿಲ್ದಾಣಕ್ಕೆ ಹೋಗದೆ ಹೊಸ ಬಸ್ ನಿಲ್ದಾಣದವರೆಗೆ ಸಂಚಾರ ಕೊನೆಗೊಳಿಸಲಾಗುವುದು ಎಂದು ಖಾಸಗಿ ಬಸ್ ಆಪರೇಟರ್ಸ್ ಫೆಡರೇಶನ್ ಪದಾಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಾಸರಗೋಡು ನಗರದ ಟ್ರಾಫಿಕ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ದೀರ್ಘ ಕಾಲದಿಂದ ಒತ್ತಾಯ ಹೇರಲಾಗುತ್ತಿದ್ದರೂ, ಅಧಿಕಾರಿಗಳು ಮೌನವಹಿಸಿರುವುದರಿಂದ ಖಾಸಗಿ ಬಸ್‌ಗಳಿಗೆ ಮುಷ್ಕರದತ್ತ ಸಾಗುವುದು ಅನಿವಾರ್ಯವಾಗಿದೆ. ನಿರಂತರ ಏರಿಕೆಯಾಗುತ್ತಿರುವ ಬಿಡಿ ಸಾಮಗ್ರಿ, ಇಂಧನ ಬೆಲೆ, ಪ್ರಿಯದರ್ಶಿನಿ ಉಚಿತ ಯೋಜನೆಯಿಂದ ಖಾಸಗಿ ಬಸ್ ಉದ್ದಿಮೆ ನೆಲಕಚ್ಚುವ ಹಂತ ತಲುಪಿದೆ. ಇದರೊಂದಿಗೆ ಕಾಸರಗೋಡು ನಗರದಲ್ಲಿನ ಟ್ರಾಫಿಕ್ ಜಾಮ್ ಸಮಸ್ಯೆ ಮತ್ತಷ್ಟು ಸಂಕಷ್ಟ ತಂದೊಡ್ಡಿದೆ.ಕೆ.ಗಿರೀಶ್, ಅಧ್ಯಕ್ಷರು, ಕೇರಳ ಖಾಸಗಿ ಬಸ್ ಮಾಲೀಕರ ಸಂಘ ಕಾಸರಗೋಡು ಜಿಲ್ಲೆ