ಸಂದೀಪ್ ಸಾಲ್ಯಾನ್ ಬಂಟ್ವಾಳ
ಡಾಂಬರು ರಸ್ತೆಗಳಲ್ಲಿ ಪದೇಪದೆ ಗುಂಡಿಗಳು ಸೃಷ್ಟಿಯಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುವುದು, ಮಳೆಗಾಲದಲ್ಲಿ ನೀರು ನಿಂತು ಅಪಾಯ ಸಂಭವಿಸುವ ಸಾಧ್ಯತೆ ಇರುವ ಕಾರಣಕ್ಕೆ ಹೆಚ್ಚು ಖರ್ಚಾದರೂ ದೀರ್ಘಕಾಲ ಬಾಳಿಕೆ ಬರುವ ಸರ್ವಋತುವಿಗೂ ಅನುಕೂಲವಾಗುವಂತಹ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಆದರೆ ಸರ್ವಕಾಲಕ್ಕೂ ಯೋಗ್ಯವಾಗಿರಬೇಕಾದ ಕಾಂಕ್ರೀಟ್ ರಸ್ತೆಯಲ್ಲಿಯೇ ಪ್ರಾಣಕ್ಕೆ ಸಂಚಕಾರ ತರುವಂತಹ ಮರಣ ಗುಂಡಿಗಳು ನಿರ್ಮಾಣವಾದರೆ...?
ಇಂತಹದ್ದೊಂದು ರಸ್ತೆ ಬಿ.ಸಿ.ರೋಡಿನಲ್ಲಿದೆ. ಇಲ್ಲಿನ ಕೈಕುಂಜೆ ಸಂಪರ್ಕಿಸುವ ಕಾಂಕ್ರೀಟ್ ರಸ್ತೆಯಲ್ಲಿ ಡಾಂಬರು ರಸ್ತೆಯಲ್ಲೂ ಕಾಣದಷ್ಟು ಹೊಂಡಗಳು ನಿರ್ಮಾಣಗೊಂಡು ಸಂಚಾರ ನರಕಯಾತನೆಯಾಗಿದೆ. ನಗರದಕ್ಕೆ ಶೋಭೆಯಾಗಿರಬೇಕಾದ ರಸ್ತೆ ನಗರದ ಅಂದವನ್ನೇ ಕೆಡಿಸುತ್ತಿದೆ.
75 ಲಕ್ಷ ರೂ. ನುಂಗಿದ ರಸ್ತೆ!: ಈಗಿನ ಕೈಕುಂಜೆ ರಸ್ತೆ ಹಿಂದೆ ರಾಷ್ಟ್ರೀಯ ಹೆದ್ದಾರಿ ಆಗಿತ್ತು. ಇಲ್ಲಿ ಲಾರಿ ಮೊದಲಾದ ಭಾರಿ ವಾಹನಗಳ ಭಾರ ಅಳತೆ ಮಾಡುವ ಸ್ಕೇಲ್ ಇದ್ದ ಕಾರಣ ಈ ಪ್ರದೇಶಕ್ಕೆ ಸ್ಕೇಲ್ ಎನ್ನುವ ಅನ್ವರ್ಥ ನಾಮವೂ ಇತ್ತು. ಆ ಬಳಿಕ ರೈಲು ಹಳಿಗಳು ರಾಷ್ಟ್ರೀಯ ಹೆದ್ದಾರಿಯನ್ನು ವಿಭಾಗಿಸಿದ ಬಳಿಕ ರಾಷ್ಟ್ರೀಯ ಹೆದ್ದಾರಿ ಪಥ ಬದಲಿಸಿ ಈ ರಸ್ತೆ ಸ್ಥಳೀಯ ರಸ್ತೆಯಾಗಿ ಉಳಿಯಿತು. ಹಲವು ವರ್ಷಗಳಿಂದ ದುರಸ್ತಿ ಕಾಣದ ಅರ್ಧ ಕಿ.ಮೀ. ಉದ್ದದ ಈ ರಸ್ತೆಯನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಬರೋಬ್ಬರಿ 75 ಲಕ್ಷ ರೂ. ವೆಚ್ಚದಲ್ಲಿ ಮುಖ್ಯಮಂತ್ರಿಯವರ ನಗರೋತ್ಥಾನ ಯೋಜನೆಯಡಿ ಅನುದಾನ ಮಂಜೂರಾಗಿತ್ತು. ರಸ್ತೆಯನ್ನು ದ್ವಿಪಥವಾಗಿ ಅಭಿವೃದ್ಧಿಪಡಿಸಿ ಕಾಂಕ್ರೀಟೀಕರಣಗೊಳಿಸಿ ಡಿವೈಡರ್ ನಿರ್ಮಿಸಿ, ಇಕ್ಕೆಲಗಳಲ್ಲಿ ಗಿಡಗಳನ್ನು ನೆಟ್ಟು ಮಾದರಿ ರಸ್ತೆಯಾಗಿ ನಿರ್ಮಿಸಲು ಬಂಟ್ವಾಳ ಪುರಸಭೆ 2013ರಲ್ಲಿ ಕಾಮಗಾರಿ ಕೈಗೆತ್ತಿಕೊಂಡಿತು. ಕೆಬಿಆರ್ ಇನ್ಫೋಟೆಕ್ ಸಂಸ್ಥೆಗೆ ಗುತ್ತಿಗೆ ನೀಡಲಾಗಿತ್ತು.
ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳ್ಳದ ಕಾರಣ 2014ರಲ್ಲಿ ಸ್ಥಳೀಯರು ಪ್ರತಿಭಟನೆ ಮಾಡಿದ್ದರು. ಮೂಲ ನಕ್ಷೆಯನ್ನು ಬದಿಗೊತ್ತಿ ಅಂತೂ ಇಂತೂ ಕಾಂಕ್ರೀಟ್ ರಸ್ತೆ ನಿರ್ಮಾಣವಾಯಿತು. ಸುಸಜ್ಜಿತವಾದ ರಸ್ತೆಯಲ್ಲಿ ಸುಗಮ ಸಂಚಾರದ ಕನಸು ಕಂಡಿದ್ದ ರಸ್ತೆ ಬಳಕೆದಾರರಿಗೆ ಕೆಲವೇ ವರ್ಷದಲ್ಲಿ ರಸ್ತೆಯ ಬಣ್ಣ ಬಯಲಾಯಿತು. ರಸ್ತೆಯುದ್ದಕ್ಕೂ ಸಿಮೆಂಟ್ ಕರಗಿ ಬರಿ ಜಲ್ಲಿಕಲ್ಲುಗಳು ಕಾಣಲು ತೊಡಗಿದವು. ನುಣುಪಾಗಿರಬೇಕಾದ ಕಾಂಕ್ರೀಟ್ ರಸ್ತೆಯಲ್ಲೀಗ ಹೊಂಡಗುಂಡಿಗಳು ತುಂಬಿ ಸಂಚಾರವೇ ದುಸ್ತರವೆನಿಸಿದೆ.
ನಗರ ಕೇಂದ್ರದಲ್ಲಿವ ಈ ರಸ್ತೆ ಬಂಟ್ವಾಳದ ರೈಲು ನಿಲ್ದಾಣಕ್ಕೆ ಸಂಪರ್ಕ ಒದಗಿಸುತ್ತದೆ. ಕೈಕುಂಜೆ ಪೂರ್ವ, ಪಶ್ಚಿಮ ಬಡಾವಣೆಗೆ ಹೋಗಲು, ಅಲೆತ್ತೂರು ಸಂಪರ್ಕಿಸಲು ಈ ರಸ್ತೆಯೇ ಪ್ರಮುಖ ಸಂಪರ್ಕ ಕೊಂಡಿ. ನ್ಯಾಯಾಲಯ, ತೋಟಗಾರಿಕೆ ಇಲಾಖೆ ಕಚೇರಿ ಬಳಿಯಿಂದ ಆರಂಭವಾಗುವ ಈ ರಸ್ತೆ ಶಿಕ್ಷಣ ಇಲಾಖೆ, ಮೆಸ್ಕಾಂ, ಎಪಿಎಂಸಿ, ಸಿಡಿಪಿಒ ಕಚೇರಿಗಳು, ಕನ್ನಡ ಭವನಕ್ಕೆ ತೆರಳುವ ಪ್ರಮುಖ ರಸ್ತೆಯಾಗಿದೆ. ಬಿ.ಮೂಡ ಗ್ರಾಮದ ಹಿಂದೂ ರುದ್ರಭೂಮಿಗೂ, ನೇತ್ರಾವತಿ ನದಿಗೂ ಈ ರಸ್ತೆಯ ಮೂಲಕ ಹೋಗಬೇಕಾಗಿದೆ.
ಇತ್ತೀಚೆಗೆ ನಡೆದ ಪ್ರಜಾಸೇವೆ ಆಂದೋಲನದ ವೇಳೆ ಸ್ಥಳೀಯರು ಈ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದ್ದರು. ಆದರೆ ರಸ್ತೆ ನಿರ್ಮಿಸಿದ ಪುರಸಭೆಯ ಮುಖ್ಯಾಧಿಕಾರಿಗೆ ಈ ರಸ್ತೆ ಯಾರಿಗೆ ಸೇರಿದ್ದು ಎಂದು ಗೊತ್ತಿರದೆ ಇದು ಪಿಡಬ್ಲೂಡಿ ರಸ್ತೆ ಎಂದು ಹೇಳಿ ಒಮ್ಮೆ ಗೊಂದಲ ಮೂಡಿಸಿದರು. ಇಂತಹ ಅಧಿಕಾರಿಗಳಿಂದ ರಸ್ತೆ ದುರಸ್ತಿಯಾಗಲು ಸಾಧ್ಯವೇ? ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೈಕುಂಜೆ ರಸ್ತೆ ಪ್ರಮುಖ ಕಚೇರಿಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಗೆ ಇಂತಹ ಸ್ಥಿತಿಯಾದರೆ ಉಳಿದ ರಸ್ತೆಗಳ ಪಾಡೇನು? ತೆರಿಗೆ ಪಾವತಿಸುವ ನಮಗೆ ಮೂಲಸೌಕರ್ಯವಾದ ಸರಿಯಾದ ರಸ್ತೆ ನಿರ್ಮಿಸಿಕೊಡುವುದು ಪುರಸಭೆಯ ಜವಾಬ್ದಾರಿ. ಆದಷ್ಟು ಬೇಗ ಈ ರಸ್ತೆಯನ್ನು ದುರಸ್ತಿಪಡಿಸಬೇಕು. ಬಿ.