ಉಪ್ಪಿನಂಗಡಿ: ಬೆಳ್ತಂಗಡಿ ತಾಲೂಕಿನ ಬಾರ್ಯ ಕೃಷಿ ಪತ್ತಿನ ಸಹಕಾರಿ ಸಂಘ 2025-2030ನೇ ಸಾಲಿನ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಬುಧವಾರ ಮೂರುಗೋಳಿ ಪಂಚಾಯಿತಿ ಸಭಾಭವನದಲ್ಲಿ ನಡೆಯಿತು. ಸಹಕಾರ ಭಾರತಿಯ ಎಲ್ಲಾ 12 ಮಂದಿ ಅಭ್ಯರ್ಥಿಗಳು ಜಯ ಸಾಧಿಸಿ ವಿಜಯಭೇರಿ ಬಾರಿಸಿದ್ದಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಸಾಮಾನ್ಯ ಕ್ಷೇತ್ರದಲ್ಲಿ ಪ್ರಸನ್ನ ಗೌಡ ಎನ್., ಪ್ರವೀಣ್ ರೈ.ಪಿ., ಪ್ರಶಾಂತ್ ಪೈ, ಚಂದ್ರಶೇಖರ ಕುಂಡಡ್ಕ, ಹರ್ಷಿತ್ ಪೂಜಾರಿ ಕಲಾಯ, ಮೋಹನ್ ಗೌಡ ಅಜಿರ, ಹಿಂದುಳಿದ ಎ. ಕ್ಷೇತ್ರದಿಂದ ಸೇಸಪ್ಪ ಸಾಲ್ಯಾನ್, ಹಿಂದುಳಿದ ಬಿ ಕ್ಷೇತ್ರದಿಂದ ರಾಜೇಶ್ ರೈ ಹೆನ್ನಡ್ಕ, ಮಹಿಳಾ ಮೀಸಲು ಕ್ಷೇತ್ರದಿಂದ ಸವಿತಾ ವೆಂಕಟೇಶ್, ಹೇಮಾವತಿ ಸುರೇಶ್ ಹೇರಾಜೆ, ಪರಿಶಿಷ್ಟ ಪಂಗಡ ಕ್ಷೇತ್ರದಿಂದ ಶಿವರಾಮ್ ಕೆಳಗಿನಂಗಡಿ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಸುರೇಶ್ ಸುಣ್ಣಾಜೆ ಗೆಲುವು ಸಾಧಿಸುವುದರೊಂದಿಗೆ ಸಂಘದ ಆಡಳಿತ ಮಂಡಳಿಯ ಎಲ್ಲಾ 12 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.
ಚುನಾವಣಾ ಪ್ರಕ್ರಿಯೆಯಲ್ಲಿ ಬೆಳ್ತಂಗಡಿ ಸಿಡಿಒ ಪ್ರತಿಮಾ ಚುನಾವಣಾಧಿಕಾರಿಯಾಗಿ ಮಂಗಳೂರಿನ ಡಿಆರ್‌ಒ ಕಚೇರಿಯ ನಾಗೇಂದ್ರ ಉಪ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಿಎ ಬ್ಯಾಂಕ್ ಮುಖ್ಯಕಾರ್ಯನಿರ್ವಣಾಧಿಕಾರಿ, ಸಿಬ್ಬಂದಿ ವರ್ಗ, ಉಪ್ಪಿನಂಗಡಿ ಆರಕ್ಷಣಾ ಠಾಣಾ ಅಧಿಕಾರಿಗಳು ವ್ಯವಸ್ಥಿತವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಿದರು. ಚುನಾವಣಾ ಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಬಿಜೆಪಿ ಪಕ್ಷದ ಮಂಡಲ, ಕಣಿಯೂರು ಮಹಾಶಕ್ತಿ ಕೇಂದ್ರ, ಶಕ್ತಿ ಕೇಂದ್ರ, ಬೂತ್ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಕಾರ್ಯಕರ್ತರು ಸಂಭ್ರಮವನ್ನಾಚರಿಸಿದರು.