ಕಾಸರಗೋಡು: ಪ್ರಯಾಣಿಕರಿಂದ ತುಂಬಿದ್ದ ಪ್ರಿಯದರ್ಶಿನಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವೃದ್ಧ ಮಹಿಳೆಯೊಬ್ಬರ ಕತ್ತಿನಿಂದ 3 ಪವನ್ ತೂಕದ ಚಿನ್ನದ ಸರ ಕಳವುಗೈದಿರುವ ಬಗ್ಗೆ ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಹೊಸದುರ್ಗ ಕೊಟ್ಟಚೇರಿ ಪುತಿಯವಳಪ್ಪಿಲ್ ನಿವಾಸಿ ತಂಬಾಯಿ (77) ಸರ ಕಳೆದುಕೊಂಡವರು. ಅವರು ಬುಧವಾರ ಚೆರುವತ್ತೂರಿನಿಂದ ಕಾಞಂಗಾಡಿಗೆ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭ ಬಸ್ ಕಾಞಂಗಾಡು ತಲುಪುತ್ತಿದ್ದಂತೆಯೇ, ಬಸ್ಸಿನಿಂದ ಇಳಿಯುವಾಗ ನೂಕುನುಗ್ಗಲು ಉಂಟಾಗಿತ್ತು. ಈ ಸಂದರ್ಭ ಕತ್ತಿನಿಂದ ಯಾರೋ ಸರ ಕಸಿದುಕೊಂಡಿರುವುದಾಗಿ ಹೊಸದುರ್ಗ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಕಾಸರಗೋಡು: ಬದಿಯಡ್ಕ ಸನಿಹದ ಮಾನ್ಯ ಕೊಲ್ಲಂಗಾನದ ಕ್ವಾರ್ಟರ್ಸ್ನಲ್ಲಿ ವಾಸಿಸುವ, ಚರ್ಲಡ್ಕ ನಿವಾಸಿ ಅಬ್ದುಲ್ ರಜಾಕ್ ಎಂಬುವರ ಪುತ್ರಿ ಆಯಿಷತ್ ಜಸೀಲ (24) ಅವರ ಮೃತದೇಹ ಮನೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗುರುವಾರ ಬೆಳಗ್ಗೆ ಜಸೀಲಾ ಅವರು ನೇಣಿನಲ್ಲಿ ನೇತಾಡುತ್ತಿರುವುದನ್ನು ಕಂಡ ಮನೆಯವರು, ತಕ್ಷಣ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ವಿದ್ಯನಗರ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.