ಸಂಪರ್ಕ ರಸ್ತೆ ಕಡಿಯಲ್ಪಟ್ಟು ಅತಂತ್ರ ಸ್ಥಿತಿಯಲ್ಲಿರುವ ಮಿನೇಜಸ್ ಅವರ ಮನೆ. 
ದಕ್ಷಿಣ ಕನ್ನಡ

ದಿಗ್ಬಂಧನದಲ್ಲಿ ವೃದ್ಧ ದಂಪತಿ!

ಮನೆಯ ಸಂಪರ್ಕ ರಸ್ತೆ ಕಡಿಯಲ್ಪಟ್ಟು ಪರದಾಟ

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ

ಹೆದ್ದಾರಿ ಅಗಲೀಕರಣದ ಕಾಮಗಾರಿ ವೃದ್ಧರಿಬ್ಬರನ್ನು ವರ್ಷಗಳ ಕಾಲ ಅಘೋಷಿತ ದಿಗ್ಭಂಧನಕ್ಕೀಡು ಮಾಡಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಹೆದ್ದಾರಿ ಚತುಷ್ಪಥ ಕಾಮಗಾರಿಯಿಂದ ಹಲವಾರು ಹೊಸ ರೀತಿಯ ಸಮಸ್ಯೆಗಳು ಪ್ರತ್ಯಕ್ಷವಾಗಿ ಗೋಚರಿಸಿದ್ದು, ಮನವಿ, ಪ್ರತಿಭಟನೆ ಮೊದಲಾದ ಮಾರ್ಗೋಪಾಯಗಳಿಂದ ಅವುಗಳನ್ನು ಬಗೆಹರಿಸಲಾಗಿದೆ. ಆದರೆ ಇಲ್ಲಿ ಮೋಲ್ನೋಟಕ್ಕೆ ಹೆದ್ದಾರಿ ಇಲಾಖೆ ಕರ್ತವ್ಯ ಲೋಪ ಕಾಣಿಸದು. ಅವರು ಭೂ ಸ್ವಾಧೀನಕ್ಕೊಳಪಡಿಸಿದ ಭೂಮಿಯಲ್ಲಿ ಪೂರ್ವಯೋಜಿತ ಕಾಮಗಾರಿ ನಡೆಸಿಕೊಂಡು ಹೋಗಿದ್ದಾರೆ. ಆದರೆ ಭೂ ಸ್ವಾಧೀನಕ್ಕೊಳಗಾದ ಸ್ಥಳದ ಸನಿಹದಲ್ಲೇ ಎತ್ತರದ ಭೂಮಿಯಲ್ಲಿರುವ ಮನೆಯೊಂದಕ್ಕೆ ಇದ್ದ ಸಂಪರ್ಕ ರಸ್ತೆ ಕಡಿಯಲ್ಪಟ್ಟು, ಅತ್ತ ರಸ್ತೆಯೂ ಇಲ್ಲ, ಇತ್ತ ಸುವ್ಯವಸ್ಥಿತ ಕಾಲುದಾರಿಯೂ ಇಲ್ಲದೆ ಈ ಮನೆಯಲ್ಲಿರುವ ವೃದ್ಧರಿಬ್ಬರು ಪಡಬಾರದ ಸಮಸ್ಯೆಗೆ ತುತ್ತಾಗಿದ್ದಾರೆ.

ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ವೃದ್ಧರೊಬ್ಬರು ಅರ್ಜಿ ಸಲ್ಲಿಕೆಗೆ ಅಂಗಾಲಾಚುತ್ತಿದ್ದಾಗ ಗಮನ ಸೆಳೆಯಲ್ಪಟ್ಟು ಮಾಧ್ಯಮದ ಮಂದಿಯಿಂದ ವಿಚಾರಿಸಲ್ಪಟ್ಟಾಗಲೇ ಈ ವೃದ್ಧ ದಂಪತಿಗಳ ಸಂಕಷ್ಟ ಅನಾವರಣಗೊಂಡಿದೆ. ಅವರು ಉಪ್ಪಿನಂಗಡಿಯ ಹೃದಯಭಾಗ ಎಂಬಂತಿರುವ ಗಾಂಧೀಪಾರ್ಕ್ ನಿವಾಸಿ 78ರ ಹರೆಯದ ಗಿಲ್ಬರ್ಟ್ ಆಂಟನಿ ಮಿನೇಜಸ್ ಮತ್ತು ಅವರ ಪತ್ನಿ 73ರ ಹರೆಯದ ವೃದ್ಧೆ ಅನಾರೋಗ್ಯ ಪೀಡಿತೆ.

ಮನೆಯಲ್ಲೇ ಅಘೋಷಿತ ದಿಗ್ಭಂಧನ

ಪದೇಪದೆ ಚಿಕಿತ್ಸೆಗೆ ಆಸ್ಪತ್ರೆಗೆ ಕರೆದೊಯ್ಯಬೇಕಾದ ಅನಿವಾರ್ಯತೆ ಇರುವುದರಿಂದ ಅನುಕೂಲಕ್ಕೆಂದು ಕಾರು ಹೊಂದಿದ್ದರು. ಯಾವಾಗ ಹೆದ್ದಾರಿ ರಸ್ತೆ ಅಗಲೀಕರಣಕ್ಕೆಂದು ಅವರ ಮನೆ ಎದುರಿನ ಭೂ ಭಾಗ ಕಡಿಯಲಾಯಿತೋ ಅಲ್ಲಿಂದ ಅವರ ಕಾರು ಸಂಚರಿಸುವ ರಸ್ತೆಯೂ ನಾಶವಾಯಿತು. ಸಮಸ್ಯೆಯನ್ನು ಸ್ಥಳೀಯ ಜನಪ್ರತಿನಿಧಿಗಳ ಗಮನಕ್ಕೆ ತಂದು, ಅವರ ಒತ್ತಡದಿಂದ ಅಲ್ಲಿ ತಡೆಗೋಡೆ ನಿರ್ಮಿಸಲಾಯಿತಾದರೂ ಪೂರ್ಣಗೊಳ್ಳದೆ ಅರ್ಧಕ್ಕೆ ನಿಂತಿತು.

ಹೆದ್ದಾರಿ ಇಲಾಖೆ ಕಾಮಗಾರಿ ಗುತ್ತಿಗೆ ವಹಿಸಿಕೊಂಡ ಸಂಸ್ಥೆ ಅಧಿಕಾರಿಗಳು ಕಾಮಗಾರಿಯಿಂದ ಯಾವೊಬ್ಬ ವ್ಯಕ್ತಿಯ ಸಹಜ ಬದುಕಿಗೆ ತೊಂದರೆಯುಂಟಾಗದಂತೆ ಎಚ್ಚರಿಕೆ ವಹಿಸಬೇಕಾದ ಕರ್ತವ್ಯ ಬದ್ಧತೆ ಇಲ್ಲಿ ಮರೆತಂತಿದೆ.

ಕಾರು ನಿಷ್ಪ್ರಯೋಜಕ

ಹೆಂಡತಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಸಲುವಾಗ ಕಾರು ಖರೀಸಿದಿದ್ದರು. ಆದರೆ ರಸ್ತೆಯೇ ಇಲ್ಲದೆ ಕಾರನ್ನು ಹೊರತೆಗೆಯಲೂ ಆಗದೆ ಅದು ಮನೆಯಂಗಳದಲ್ಲಿ ಬಹಳ ಕಾಲದಿಂದ ನಿಂತುಕೊಂಡಿದೆ. ಅನಾರೋಗ್ಯ ಪೀಡಿತ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗದೆ ಮನೆಯಲ್ಲಿಯೇ ಇರಿಸುವ ದುಸ್ಥಿತಿ ಇವರದ್ದಾಗಿದೆ. ಪ್ರಸಕ್ತ ಮನೆಗೆ ಸಂಪರ್ಕ ರಸ್ತೆ ಇಲ್ಲದೆ ಯಾವುದೇ ವಾಹನವೂ ಬರಲಾಗದ ಸ್ಥಿತಿಯಲ್ಲಿರುವ ದಂಪತಿಗೆ ಅಘೋಷಿತ ದಿಗ್ಭಂಧನ ವಿಧಿಸಿದಂತಾಗಿದೆ.

ಹೆದ್ದಾರಿ ಸರ್ವೀಸ್ ರಸ್ತೆ ನಿರ್ಮಾಣಕ್ಕಾಗಿ ಮನೆ ಎದುರಿನ ಭೂ ಭಾಗ ಕಡಿಯಲಾಯಿತು. ಪರಿಣಾಮ ಅಲ್ಲಿದ್ದ ರಸ್ತೆ ಮಳೆಗಾಲದಲ್ಲಿ ಕುಸಿತಕ್ಕೆ ಒಳಗಾಗಿ ನಾಶವಾಯಿತು. ಅಲ್ಲಿ ತಡೆಗೋಡೆ ನಿರ್ಮಿಸಿ ರಸ್ತೆ ಪುನಃ ನಿರ್ಮಿಸಿಕೊಡಿ ಎಂದು ಕಂಡಕಂಡವರಲ್ಲಿ ವಿನಂತಿಸಿದ್ದೆ. ಇತ್ತೀಚೆಗೆ ತಡೆಗೋಡೆ ನಿರ್ಮಾಣ ನಡೆಯಿತಾದರೂ ಅದು ಅರ್ಧದಲ್ಲಿಯೇ ನಿಂತಿದೆ. ಅನಾರೋಗ್ಯ ಪೀಡಿತ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗದ ಸ್ಥಿತಿ ಎದುರಿಗಾಗಿದೆ. ಶಾಸಕರಾದಿಯಾಗಿ ಎಲ್ಲರಲ್ಲೂ ಮನವಿ ಕೊಟ್ಟಿದ್ದೇನೆ. ನಮಗೆ ನ್ಯಾಯ ಸಿಗಬೇಕಾಗಿದೆ.
ಗಿಲ್ಬರ್ಟ್ ಆಂಟನಿ ಮಿನೇಜಸ್
ಹೆದ್ದಾರಿ ಕಾಮಗಾರಿ ಸಂಸ್ಥೆ ಅಧಿಕಾರಿಗಳಲ್ಲಿ ವಿನಂತಿಸಿ ಅವರ ವ್ಯಾಪ್ತಿಯ ಹೊರತಾಗಿಯೂ ಅಲ್ಲಿ ತಡೆಗೋಡೆ ನಿರ್ಮಿಸಲು ಪ್ರಯತ್ನಿಸಲಾಗಿದೆ. ಆದರೆ ತಡೆಗೋಡೆ ನಮ್ಮ ಅಪೇಕ್ಷಿತ ಎತ್ತರಕ್ಕೆ ನಿರ್ಮಿಸಿಲ್ಲ. ಅಪೇಕ್ಷಿತ ಎತ್ತರಕ್ಕೆ ತಡೆಗೋಡೆ ನಿರ್ಮಿಸಿದ್ದರೆ ಆ ಭಾಗದಲ್ಲಿ ರಸ್ತೆ ನಿರ್ಮಾಣ ಕಾರ್ಯವನ್ನು ಪಂಚಾಯಿತಿಯಿಂದಾದರೂ ನಡೆಸಬಹುದಾಗಿದೆ. ಹಲವಾರು ಅಡೆತಡೆಗಳಿವೆ. ಅಧಿಕಾರಿಗಳು ಒಂದಷ್ಟು ಗಮನಹರಿಸಿದರೆ ಸಮಸ್ಯೆ ನಿವಾರಿಸಬಹುದಾಗಿದೆ.
ಯು.ಟಿ.ಮಹಮ್ಮದ್ ತೌಷೀಪ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ