ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಸರ್ಕಾರಿ ಶಾಲೆ ಅಭಿವೃದ್ಧಿಗೊಂಡು ಇಲ್ಲಿ ಕಲಿಯುವ ಮಕ್ಕಳು ಉನ್ನತ ಸ್ಥಾನ ತಲುಪಬೇಕೆನ್ನುವ ಉದ್ದೇಶದಿಂದ ಯುವಕರು ಉತ್ತಮ ಕೆಲಸ ಮಾಡಿದ್ದಾರೆ ಎಂದು ಮಂಗಳೂರು ಅಭಿವೃದ್ಧಿ ಪ್ರಾಧಿಕಾರದ ನಿಕಟಪೂರ್ವ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದರು.
ಆಂಬ್ರೋಸ್ ವೇಗಸ್ ಅವರ ತಾಯಿ ಲೀನಾ ವೇಗಸ್ ಸ್ಮರಣಾರ್ಥ ಸಮಾಜಸೇವಕ ನೆಲ್ಸನ್ ಬಗಂಬಿಲ ನೇತೃತ್ವದಲ್ಲಿ ಶನಿವಾರ ಬಗಂಬಿಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯುತ್ ದುರಸ್ತಿ, ನೀರಿನ ಪೈಪ್ ಅಳವಡಿಕೆ ಹಾಗೂ 100 ಆಸನಗಳ ಹಸ್ತಾಂತರ, ಸಮವಸ್ತ್ರ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಾಲೆಯ ಉನ್ನತಿಗೆ ಶ್ರಮಿಸಿದ ಆಂಬ್ರೋಸ್ ವೇಗಸ್, ಕೀರ್ತನ್ ತುಡರ್ ಮತ್ತು ಮತದಾರರ ಪಟ್ಟಿ ಪರಿಷ್ಕರಣೆ ಸಮಯದಲ್ಲಿ ಬಗಂಬಿಲ ಬೂತ್ ಮಟ್ಟದ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಪ್ರತಿಮಾ ಹೆಬ್ಬಾರ್, ಕವಿತಾ ನಾಯಕ್, ಯಮುನಾ ಅವರನ್ನು ಸನ್ಮಾನಿಸಲಾಯಿತು. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರ್, ಸೋಮೇಶ್ವರ ಪುರಸಭೆಯ ಸದಸ್ಯ ಪುರುಷೋತ್ತಮ್ ಶೆಟ್ಟಿ ಪಿಲಾರು, ಜಸಿಂತಾ ಮೆಂಡೋನ್ಸ, ಪವನ್ ರಾಜ್ ಕೊಲ್ಯ, ಮನ್ಸೂರ್ ಮಂಚಿಲ, ಝಿಯಾದ್ ಮುಕ್ಕಚ್ಚೇರಿ, ಅಶೋಕ್ ಡಿಸೋಜಾ, ಮಿತೇಶ್ ಪೂಜಾರಿ, ಉದಯರಾಜ್ ಶೆಟ್ಟಿ ಬಗಂಬಿಲ, ವಿನಯ್ ಬಗಂಬಿಲ, ಅವಿಲ್, ದೇವರಾಜ್, ಮಿಥುನ್ ಬಗಂಬಿಲ ಮೊದಲಾದವರು ಉಪಸ್ಥಿತರಿದ್ದರು. ಸಂದೀಪ್ ಕೊಲ್ಯ ಸ್ವಾಗತಿಸಿದರು, ಶಾಲೆ ಮುಖ್ಯ ಶಿಕ್ಷಕ ವಸಂತ್ ವಂದಿಸಿದರು.