ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಇ.ಡಿ ಕಾರ್ಯಾಚರಣೆ ಶಿವಂ ಅಸೋಸಿಯೇಟ್ಸ್ ಸಂಸ್ಥೆ ಮುಖ್ಯಸ್ಥ ಬಂಧನ

ಮಂಗಳೂರು: ಬಹುರಾಜ್ಯ ಬಹುಕೋಟಿ ಪೋನ್ಜಿ ಹಗರಣ ಸುಮಾರು 2,110 ಕೋಟಿ ರೂ. ವಂಚನೆಗೆ ಸಂಬಂಧಿಸಿದಂತೆ ಬೆಳಗಾವಿಯ ಶಿವಂ ಅಸೋಸಿಯೇಟ್ಸ್ ಸಂಸ್ಥೆ ಮುಖ್ಯಸ್ಥ ಶಿವಾನಂದ ಸಿದ್ದಪ್ಪ ನೀಲಣ್ಣವರ್ ನನ್ನು ಜಾರಿ ನಿರ್ದೇಶನಾಲಯ (ಇ.ಡಿ) ಮಂಗಳೂರು ಉಪ ವಲಯ ಕಚೇರಿ ಅಧಿಕಾರಿಗಳು ಬೆಳಗಾವಿಯಲ್ಲಿ ಬಂಧಿಸಿದ್ದಾರೆ.

ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ ಅಡಿಯಲ್ಲಿ ಆ.13ರಂದು ಬೆಳಗಾವಿಯಲ್ಲಿ ಬಂಧಿಸಲಾಗಿದ್ದು, ಮಂಗಳೂರಿನ ಪಿಎಂಎಲ್‌ಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ನ್ಯಾಯಾಲಯ ಆ.24ರವರೆಗೆ 12 ದಿನಗಳ ಕಾಲ ಇ.ಡಿ. ವಶಕ್ಕೆ ಒಪ್ಪಿಸಿದೆ.
ಶಿವಾನಂದ್ ನೀಲಣ್ಣನವರ್ ವಿರುದ್ಧ ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ 2019ರ ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಕಾಯ್ದೆ (ಪಿಎಂಎಲ್‌ಎ) ಹಾಗೂ ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿನ ಠೇವಣಿದಾರರ ಹಿತಾಸಕ್ತಿ ಸಂರಕ್ಷಣ ಕಾಯ್ದೆ-2004ರ ಅಡಿಯಲ್ಲಿ ದಾಖಲಾದ ಎಫ್‌ಐಆರ್ ಆಧರಿಸಿ ಇ.ಡಿ. ಪ್ರಕರಣದ ತನಿಖೆ ಆರಂಭಿಸಿತ್ತು.
ತನಿಖೆಯ ವೇಳೆ, ಶಿವಂ ಅಸೋಸಿಯೇಟ್ಸ್ ಸಂಸ್ಥೆಯು ಬಹುರಾಜ್ಯ ವ್ಯಾಪ್ತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ಪೊಂಜಿ ಮಾದರಿಯ ಹೂಡಿಕೆ ಯೋಜನೆ ನಡೆಸುತ್ತಿತ್ತು ಎಂಬುದನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಪತ್ತೆಹಚ್ಚಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಛತ್ತೀಸ್‌ಗಢ ಸೇರಿದಂತೆ ಹಲವು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದ ಬೃಹತ್ ಜಾಲವನ್ನು ಹೊಂದಿದ್ದ ಶಿವಂ ಅಸೋಸಿಯೇಟ್ಸ್ ಡಿಜಿಟಲ್ ವ್ಯವಸ್ಥೆ ಹಾಗೂ ಏಜೆಂಟರ ಮೂಲಕ ಸಾರ್ವಜನಿಕರಿಂದ ಅಕ್ರಮವಾಗಿ 2,110.97 ಕೋಟಿ ಸಂಗ್ರಹಿಸಿದೆ. ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ತಿಂಗಳು ಶೇ.3ರಷ್ಟು ಲಾಭ ನೀಡುವುದಾಗಿ ಭರವಸೆ ನೀಡಲಾಗಿತ್ತು. ಜತೆಗೆ ಹೂಡಿಕೆದಾರರನ್ನು ಆಕರ್ಷಿಸಲು ಮಧ್ಯವರ್ತಿಗಳಿಗೆ ಶೇಕಡ 0.5ರಷ್ಟು ಕಮಿಷನ್ ನೀಡುತ್ತಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪಿಎಂಎಲ್‌ಎ ಅಡಿಯಲ್ಲಿ ನಡೆಸಿದ ತನಿಖೆಯಲ್ಲಿ, ಹೂಡಿಕೆದಾರರಿಂದ 2,110.97 ಕೋಟಿ ರೂ.ಸಂಗ್ರಹಿಸಿದ್ದರೂ, ಅದರ ಒಂದು ಭಾಗದಷ್ಟನ್ನು ಮಾತ್ರ ಹೂಡಿಕೆದಾರರಿಗೆ ಮರುಪಾವತಿಸಿರುವುದು ಬೆಳಕಿಗೆ ಬಂದಿದೆ. 2019 ರಿಂದ ಸಂಸ್ಥೆಯು ಷೇರು ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ನಷ್ಟ ಅನುಭವಿಸಿದ್ದರಿಂದ, ವರ್ಷದಿಂದ ವರ್ಷಕ್ಕೆ ನಷ್ಟ ಹೆಚ್ಚಾಗಿದೆ ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಇದನ್ನು ಮರೆಮಾಚಿ ಮಾರುಕಟ್ಟೆಯಲ್ಲಿ ಸಂಸ್ಥೆಯ ಮೇಲಿನ ವಿಶ್ವಾಸವನ್ನು ಉಳಿಸಿಕೊಳ್ಳುವ ಉದ್ದೇಶದಿಂದ, ಹೂಡಿಕೆದಾರರಿಂದ ಸಂಗ್ರಹಿಸಿದ ಹಣವನ್ನು ಹಿಂದಿನ ಹೂಡಿಕೆದಾರರಿಗೆ ನೀಡಬೇಕಿದ್ದ ಬಡ್ಡಿ ಪಾವತಿಗೆ ನೇರವಾಗಿ ವರ್ಗಾಯಿಸಲಾಗುತ್ತಿತ್ತು.
ಸಂಗ್ರಹಿಸಲಾದ ಹಣವನ್ನು ವಿವಿಧ ವೈಯಕ್ತಿಕ ಬ್ಯಾಂಕ್ ಖಾತೆಗಳು, ಕುಟುಂಬ ಸದಸ್ಯರ ಖಾತೆಗಳು ಹಾಗೂ ಶಿವಂ ಸೇವಾ (ಒಪಿಸಿ) ಪ್ರೈವೇಟ್ ಲಿಮಿಟೆಡ್ ಮತ್ತು ಶಿವಂ ಪ್ರೊಡಕ್ಷನ್ಸ್ ಸೇರಿದಂತೆ ಸಂಬಂಧಿತ ಸಂಸ್ಥೆಗಳ ಮೂಲಕ ತ್ವರಿತವಾಗಿ ಹಲವು ಹಂತಗಳಲ್ಲಿ ವರ್ಗಾವಣೆ ಮಾಡಿ ಬಳಕೆ ಮಾಡಲಾಗುತ್ತಿತ್ತು. ಅಕ್ರಮವಾಗಿ ಸಂಗ್ರಹಿಸಿದ ಹಣವನ್ನು ಐಷಾರಾಮಿ ವಾಹನಗಳ ಖರೀದಿ, ದುಬಾರಿ ಬಂಗಲೆಗಳ ನಿರ್ಮಾಣ ಹಾಗೂ ಬೇನಾಮಿ ಪಾಲುದಾರರ ಹೆಸರಿನಲ್ಲಿ ಆಸ್ತಿಗಳ ಖರೀದಿಗೂ ಬಳಸಲಾಗಿದೆ. ಇದಲ್ಲದೆ, ಈ ಹಣದ ಒಂದು ಭಾಗವನ್ನು ಚಲನಚಿತ್ರ ನಿರ್ಮಾಣಕ್ಕೆ ಸಂಬಂಧಿಸಿದ ವೆಚ್ಚಗಳಿಗೂ ವರ್ಗಾಯಿಸಲಾಗಿದೆ ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ದುರುಪಯೋಗಪಡಿಸಿಕೊಂಡ ಹಣವನ್ನು ಪಿಎಂಎಲ್‌ಎ ಅಡಿಯಲ್ಲಿ ಅಪರಾಧದಿಂದ ಬಂದ ಆದಾಯ ಎಂದು ಇ.ಡಿ. ಗುರುತಿಸಿದೆ. ಉಳಿದ ಬಾಧ್ಯತೆಗಳು ಹಾಗೂ ಹಣದ ಹರಿವಿನ ಕುರಿತು ಪತ್ತೆ ಕಾರ್ಯ ಮುಂದುವರಿದಿದ್ದು, ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ. ಪ್ರಕಟನೆಯಲ್ಲಿ ತಿಳಿಸಿದೆ.