ದಕ್ಷಿಣ ಕನ್ನಡ

2,459 ಕೋಟಿ ರೂ. ಪೊಂಜಿ ಹಗರಣ ಐವರು ಆರೋಪಿಗಳ ವಿರುದ್ಧ ಇ.ಡಿ.ಯಿಂದ ನ್ಯಾಯಾಲಯಕ್ಕೆ ಪ್ರಾಸಿಕ್ಯೂಷನ್ ದೂರು

ಮಂಗಳೂರು: ಸಾರ್ವಜನಿಕರಿಂದ 2,459.49 ಕೋಟಿ ರೂ. ಸಂಗ್ರಹಿಸಿದ ಬೃಹತ್ ಪೊಂಜಿ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದ (ಇ.ಡಿ.) ಮಂಗಳೂರು ಉಪ ವಲಯ ಕಚೇರಿಯು ಐವರು ಆರೋಪಿಗಳು ಹಾಗೂ ಸಂಸ್ಥೆಗಳ ವಿರುದ್ಧ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಶುಕ್ರವಾರ ಪ್ರಾಸಿಕ್ಯೂಷನ್ ದೂರು ಸಲ್ಲಿಸಿದೆ.

ಪ್ರಕರಣದ ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲಣ್ಣವರ ಹಾಗೂ ಅವರ ಸಂಸ್ಥೆ ಮೆಸರ್ಸ್ ಶಿವಂ ಅಸೋಸಿಯೇಟ್ಸ್ ಸೇರಿದಂತೆ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು ಶಿಕ್ಷೆ ವಿಧಿಸುವಂತೆ ದೂರಿನಲ್ಲಿ ಕೋರಲಾಗಿದೆ.

35 ಸಾವಿರಕ್ಕೂ ಹೆಚ್ಚು ಹೂಡಿಕೆದಾರರಿಗೆ ವಂಚನೆ ಆರೋಪ

ತನಿಖೆಯ ಪ್ರಕಾರ, ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲಣ್ಣವರ ತನ್ನ ಸಹಚರರೊಂದಿಗೆ ಸೇರಿ ಮೆಸರ್ಸ್ ಶಿವಂ ಅಸೋಸಿಯೇಟ್ಸ್ ಹಾಗೂ ಇತರ ಸಂಸ್ಥೆಗಳ ಮೂಲಕ ಹೂಡಿಕೆ ಜಾಲವನ್ನು ನಡೆಸುತ್ತಿದ್ದ ಎನ್ನಲಾಗಿದೆ. ತಿಂಗಳಿಗೆ ಶೇ.3ರಷ್ಟು ಖಚಿತ ಲಾಭಾಂಶ ನೀಡುವುದಾಗಿ ಭರವಸೆ ನೀಡಿ, ಹೊಸ ಹೂಡಿಕೆದಾರರನ್ನು ಪರಿಚಯಿಸುವವರಿಗೆ ಶೇ. 0.5ರಷ್ಟು ರೆಫರಲ್ ಕಮಿಷನ್ ನೀಡುವ ಆಮಿಷವೊಡ್ಡಲಾಗಿತ್ತು. ಈ ಜಾಲದಲ್ಲಿ ರೆಫರಲ್ ಏಜೆಂಟ್‌ಗಳನ್ನು ‘ಲೀಡರ್‌ಗಳು’ ಎಂದು ಪರಿಚಯಿಸಲಾಗುತ್ತಿತ್ತು ಎಂದು ಇ.ಡಿ. ತಿಳಿಸಿದೆ.

ಈ ಯೋಜನೆಯಡಿ 35 ಸಾವಿರಕ್ಕೂ ಹೆಚ್ಚು ಸಾರ್ವಜನಿಕರಿಂದ ಒಟ್ಟು 2,459.49 ಕೋಟಿ ರೂ. ಸಂಗ್ರಹಿಸಲಾಗಿತ್ತು ಎಂದು ತನಿಖೆಯಲ್ಲಿ ತಿಳಿದು ಬಂದಿದೆ. ಹೊಸ ಹೂಡಿಕೆದಾರರಿಂದ ಸಂಗ್ರಹಿಸಿದ ಹಣದ ಒಂದು ಭಾಗವನ್ನು ಹಳೇ ಹೂಡಿಕೆದಾರರಿಗೆ ಪಾವತಿಸಿ ಯೋಜನೆಯ ಮೇಲಿನ ವಿಶ್ವಾಸ ಉಳಿಸಿಕೊಳ್ಳಲಾಗುತ್ತಿತ್ತು. ಉಳಿದ ಹಣವನ್ನು ವಿವಿಧ ಮಾರ್ಗಗಳ ಮೂಲಕ ಬೇರೆಡೆಗೆ ವರ್ಗಾಯಿಸಿ ವೈಯಕ್ತಿಕ ಲಾಭಕ್ಕಾಗಿ ಬಳಸಲಾಗಿದೆ ಎಂಬುದು ಇ.ಡಿ. ಆರೋಪವಾಗಿದೆ. ಹೂಡಿಕೆದಾರರಿಗೆ ಪಾವತಿಸಬೇಕಿದ್ದ ಅಸಲು ಮೊತ್ತದಲ್ಲಿ 2,125.60 ಕೋಟಿ ರೂ. ಬಾಕಿ ಉಳಿದಿದ್ದು, ಈ ಮೊತ್ತವನ್ನು ಸಾರ್ವಜನಿಕರಿಗೆ ಮರುಪಾವತಿಸಿಲ್ಲ ಎಂದು ತನಿಖಾ ಸಂಸ್ಥೆ ತಿಳಿಸಿದೆ.

8 ಸ್ಥಳಗಳಲ್ಲಿ ಶೋಧ; 2.02 ಕೋಟಿ ರೂ. ಸ್ಥಗಿತ

2026ರ ಆಗಸ್ಟ್‌ನಲ್ಲಿ ಬೆಳಗಾವಿ, ಚಿಕ್ಕೋಡಿ ಹಾಗೂ ನಿಪ್ಪಾಣಿ ಪ್ರದೇಶಗಳಲ್ಲಿ ಆರೋಪಿಗಳು ಮತ್ತು ಅವರ ಸಹಚರರಿಗೆ ಸಂಬಂಧಿಸಿದ ಎಂಟು ಸ್ಥಳಗಳಲ್ಲಿ ಇ.ಡಿ. ಅಧಿಕಾರಿಗಳು ಶೋಧ ನಡೆಸಿದ್ದರು. ಈ ವೇಳೆ ಮಹತ್ವದ ದಾಖಲೆಗಳು, ಕೈಬರಹದ ಲೆಕ್ಕಪರಿಶೋಧನಾ ಟಿಪ್ಪಣಿಗಳು, ಮೊಬೈಲ್ ಸಾಧನಗಳು ಹಾಗೂ ಸಾಫ್ಟ್‌ವೇರ್‌ನಲ್ಲಿನ ವಹಿವಾಟಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅಕ್ರಮವಾಗಿ ಸಂಗ್ರಹಿಸಿದ ಹಣದ ಸೃಷ್ಟಿ, ವರ್ಗಾವಣೆ ಮತ್ತು ವಿವಿಧೆಡೆ ಹೂಡಿಕೆ ಮಾಡಿರುವುದಕ್ಕೆ ಸಂಬಂಧಿಸಿದ ಮಾಹಿತಿಗಳು ಈ ದಾಖಲೆಗಳಿಂದ ಲಭ್ಯವಾಗಿವೆ ಎಂದು ಇ.ಡಿ. ಹೇಳಿದೆ.

ಪ್ರಮುಖ ಆರೋಪಿಗಳು, ಅವರ ಕುಟುಂಬ ಸದಸ್ಯರು ಹಾಗೂ ವಿವಿಧ ಮುಂಚೂಣಿ ಸಂಸ್ಥೆಗಳ ನಡುವಿನ ಹಣಕಾಸಿನ ಸಂಪರ್ಕವೂ ತನಿಖೆಯಲ್ಲಿ ಬಹಿರಂಗವಾಗಿದೆ ಎನ್ನಲಾಗಿದೆ. ಹೂಡಿಕೆದಾರರಿಂದ ಸಂಗ್ರಹಿಸಿದ ಹಣಕ್ಕೆ ಸಂಬಂಧಿಸಿದ 2.02 ಕೋಟಿ ರೂ. ಮೊತ್ತದ ಬ್ಯಾಂಕ್ ಖಾತೆಗಳು ಮತ್ತು ಸ್ಥಿರ ಠೇವಣಿಗಳನ್ನು ಸಹಚರರಿಗೆ ಸಂಬಂಧಿಸಿದಂತೆ ಸ್ಥಗಿತಗೊಳಿಸಲಾಗಿದೆ. ಪ್ರಮುಖ ಆರೋಪಿ ಶಿವಾನಂದ ಸಿದ್ದಪ್ಪ ನೀಲಣ್ಣವರನನ್ನು 2026ರ ಆ.13ರಂದು ಬಂಧಿಸಲಾಗಿದ್ದು, ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ.

ಷೇರು ವಹಿವಾಟಿನಲ್ಲಿ 185.95 ಕೋಟಿ ರೂ. ನಷ್ಟ

ಹಗರಣದ ಹಣವನ್ನು ವಿವಿಧ ಮಾರ್ಗಗಳ ಮೂಲಕ ವರ್ಗಾಯಿಸಿ, ಅದರ ಮೂಲವನ್ನು ಮರೆಮಾಚಲು ಪ್ರಯತ್ನಿಸಲಾಗಿದೆ ಎಂದು ಇ.ಡಿ. ತನಿಖೆಯಲ್ಲಿ ಆರೋಪಿಸಿದೆ. ಹೂಡಿಕೆದಾರರಿಂದ ಸಂಗ್ರಹಿಸಿದ ಗಣನೀಯ ಮೊತ್ತವನ್ನು ಹೆಚ್ಚಿನ ಅಪಾಯ ಹೊಂದಿರುವ ಷೇರು ವಹಿವಾಟಿನಲ್ಲಿ ಹೂಡಿಕೆ ಮಾಡಲಾಗಿದ್ದು, ಇದರಿಂದ 185.95 ಕೋಟಿ ರೂ. ನಿವ್ವಳ ನಷ್ಟ ಉಂಟಾಗಿದೆ ಎಂದು ತನಿಖೆಯಲ್ಲಿ ತಿಳಿದುಬಂದಿದೆ.

ಸುಮಾರು 25 ಕೋಟಿ ರೂ. ಹಣವನ್ನು ಶ್ರೀಮಾತಾ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ ಲಿಮಿಟೆಡ್ ಹಾಗೂ ಧನಶ್ರೀ ಮಲ್ಟಿಪರ್ಪಸ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸೇರಿದಂತೆ ಸಹಕಾರಿ ಸಂಸ್ಥೆಗಳ ಮೂಲಕ ವರ್ಗಾಯಿಸಲಾಗಿತ್ತು ಎನ್ನಲಾಗಿದೆ. ಈ ಹಣದಿಂದ ಸ್ಥಿರ ಠೇವಣಿಗಳನ್ನು ಸೃಷ್ಟಿಸಿ, ಸಹಚರರ ಹೆಸರಿನಲ್ಲಿ ಸಾಲ ಪಡೆದು ಭೂಮಿಯನ್ನು ಖರೀದಿಸಲು ಬಳಸಲಾಗಿದೆ ಎಂಬ ಆರೋಪವೂ ಇದೆ.

ಕುಟುಂಬದ ಖಾತೆಗಳಿಗೆ ಹಣ ವರ್ಗಾವಣೆ

ತನಿಖೆಯ ಪ್ರಕಾರ, ಆರೋಪಿಯ ಪತ್ನಿ ಸಂಗೀತಾ ಹಾಗೂ ಅಪ್ರಾಪ್ತ ಪುತ್ರ ಸಿದ್ಧಾಂತ್ ಅವರ ಬ್ಯಾಂಕ್ ಖಾತೆಗಳಿಗೂ ಹಣ ವರ್ಗಾಯಿಸಲಾಗಿತ್ತು. ಶಿವಂ ಸೇವಾ (ಒಪಿಸಿ) ಪ್ರೈವೇಟ್ ಲಿಮಿಟೆಡ್‌ಗೆ ಸುಮಾರು 19 ಕೋಟಿ ರೂ. ಹಣ ವರ್ಗಾವಣೆಯಾಗಿರುವುದರ ಜೊತೆಗೆ ಶಿವಂ ಲೈಫ್‌ಲೈನ್ ಪ್ರೈವೇಟ್ ಲಿಮಿಟೆಡ್ ಮತ್ತು ಶಿವಂ ಫುಡ್ಸ್ ಸೇರಿದಂತೆ ಇತರ ವ್ಯವಹಾರಗಳಿಗೂ ಹಣ ಹರಿದು ಹೋಗಿರುವುದನ್ನು ಇ.ಡಿ. ಪತ್ತೆಹಚ್ಚಿದೆ ಎಂದು ತಿಳಿಸಿದೆ.

ಇದಲ್ಲದೆ, ಕನ್ನಡ ಚಲನಚಿತ್ರ ‘ಚಾಂಪಿಯನ್’ ನಿರ್ಮಾಣದ ವಾಣಿಜ್ಯ ಚಟುವಟಿಕೆಗಳಿಗೆ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಲ್ಲಿ 5 ಕೋಟಿ ರೂ. ಬಳಸಲಾಗಿದೆ ಎಂಬುದೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಇ.ಡಿ. ಆರೋಪಿಸಿದೆ.

ಪ್ರಕರಣದಲ್ಲಿ ಅಕ್ರಮ ಹಣದ ವರ್ಗಾವಣೆ, ಹೂಡಿಕೆದಾರರ ಹಣದ ದುರ್ಬಳಕೆ ಹಾಗೂ ಸಂಬಂಧಿತ ಹಣಕಾಸು ವ್ಯವಹಾರಗಳ ಕುರಿತು ಇ.ಡಿ. ತನಿಖೆ ಮುಂದುವರಿಸಿದೆ.