ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ ಸಂಭ್ರಮವನ್ನು ಭಾನುವಾರ ಕರಾವಳಿ ಜಿಲ್ಲೆಯಾದ್ಯಂತ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಮಂಗಳೂರು: ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ ಸಂಭ್ರಮವನ್ನು ಭಾನುವಾರ ಕರಾವಳಿ ಜಿಲ್ಲೆಯಾದ್ಯಂತ ಕ್ರೈಸ್ತರು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೇಸುಕ್ರಿಸ್ತರ ಪುನರುತ್ಥಾನದ ಹಬ್ಬ ಈಸ್ಟರ್ ಭಾನುವಾರ ಭಕ್ತಿಭಾವ ಹಾಗೂ ಸಂಭ್ರಮದ ವಾತಾವರಣದಲ್ಲಿ ಆಚರಿಸಲಾಯಿತು. ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ವಿವಿಧ ಚರ್ಚ್‌ಗಳಲ್ಲಿ ಸಾವಿರಾರು ಭಕ್ತರು ಸೇರಿ ವಿಶೇಷ ಪ್ರಾರ್ಥನೆಗಳಲ್ಲಿ ಭಾಗವಹಿಸಿದರು.
ಈಸ್ಟರ್ ಪೂರ್ವದ ಶನಿವಾರ ರಾತ್ರಿ ಈಸ್ಟರ್ ವಿಜಿಲ್ ಮೆಸ್‌ಗಳು ಭಕ್ತಿಭಾವದಿಂದ ನೆರವೇರಿದವು. ಮಂಗಳೂರು ನಗರದ ರೋಸಾರಿಯೋ ಕ್ಯಾಥೆಡ್ರಲ್ ಸೇರಿದಂತೆ ಅನೇಕ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆ, ಭಜನೆ ಹಾಗೂ ಬೆಳಕಿನ ಆಚರಣೆಗಳು ನಡೆದವು. ಜಿಲ್ಲೆಯಾದ್ಯಂತ ವಿವಿಧ ಪಾರಿಷ್‌ಗಳಲ್ಲಿ ಯೇಸುಕ್ರಿಸ್ತನ ಪುನರುತ್ಥಾನದ ಸಂದೇಶ ಸಾರುವ ಧಾರ್ಮಿಕ ಕಾರ್ಯಕ್ರಮಗಳು, ಪ್ರಾರ್ಥನೆಗಳು ಹಾಗೂ ಆರಾಧನೆಗಳು ನಡೆದವು. ಸಾವಿರಾರು ಭಕ್ತರು ಕುಟುಂಬ ಸಮೇತರಾಗಿ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಹಬ್ಬವನ್ನು ಆಚರಿಸಿದರು. ಮಂಗಳೂರು ಧರ್ಮಪ್ರಾಂತದ ಎಲ್ಲಾ ಚರ್ಚ್ ಗಳಲ್ಲಿ ಶನಿವಾರ ರಾತ್ರಿ ಜಾಗರಣೆಯ ಬಲಿಪೂಜೆ ನಡೆದರೆ, ಭಾನುವಾರ ಬೆಳಗ್ಗೆ ಈಸ್ಟರ್ ಬಲಿಪೂಜೆ ನೆರವೇರಿತು.
*ಬಿಷಪ್ ಹೌಸ್‌ನ ಚಾಪೆಲ್ ಬಲಿಪೂಜೆ
ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ದಾನ್ಹಾ ಅವರು ಈಸ್ಟರ್ ಹಬ್ಬದ ಬಲಿಪೂಜೆಯನ್ನು ಬಿಷಪ್ ಹೌಸ್‌ನ ಚಾಪೆಲ್‌ನಲ್ಲಿ ನೆರವೇರಿಸಿದರು. ಆಯಾಯ ಊರಿನ ಚರ್ಚ್ ಗಳಲ್ಲಿ ಸ್ಥಳೀಯ ಧರ್ಮಗುರುಗಳ ನೇತತ್ವದಲ್ಲಿ ಬಲಿಪೂಜೆ ಸಹಿತ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಶನಿವಾರ ರಾತ್ರಿ ಬೆಳಕು ಆಶೀರ್ವಚನ ನಡೆಸಲಾಯಿತು. ಬಳಿಕ ಅದರಿಂದ ಧರ್ಮಗುರುಗಳು ಮುಖ್ಯ ಮೋಂಬತ್ತಿಯನ್ನು ಬೆಳಗಿದರು. ಮೊಂಬತ್ತಿಯ ಮೆರವಣಿಗೆ ನಡೆದು ಬಲಿಪೂಜೆಯ ವೇಳೆ ಕ್ರ್ತ್ರೈಸ್ತರು ಕ್ಯಾಂಡಲ್‌ಗಳನ್ನು ಹಿಡಿದುಕೊಂಡು ದೀಕ್ಷಾ ಸ್ನಾನದ ವಾಗ್ದಾನಗಳನ್ನು ನವೀಕರಿಸಿದರು.
ಪವಿತ್ರ ಸಂಸ್ಕಾರಕ್ಕೆ ಬಳಸುವ ಪವಿತ್ರ ಜಲದ ಆಶೀರ್ವಾದ ನಡೆಯಿತು. ಬಲಿಪೂಜೆಯ ಬಳಿಕ ಭಾಗವಹಿಸಿದ ಕ್ರೆಸ್ತ ಬಾಂಧವರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಬಳಿಕ ಹಬ್ಬದೂಟದ ಸವಿಯುಂಡರು.