ಮೊವಾಡಿಯಲ್ಲಿ ಕುಸಿದ ಪಂಚಾಯಿತಿ ಬಾವಿ. 
ದಕ್ಷಿಣ ಕನ್ನಡ

ಮೊವಾಡಿಯಲ್ಲಿ ಕುಡಿವ ನೀರಿನ ಸಮಸ್ಯೆ

ಬಾವಿ ಕುಸಿದು ನೀರೆತ್ತಲು ಅಡ್ಡಿ

ವಿಜಯವಾಣಿ ಸುದ್ದಿಜಾಲ ಕುಂದಾಪುರ

ತ್ರಾಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೊವಾಡಿ ಭಾಗದಲ್ಲಿ ಈಗಾಗಲೇ ನೀರಿನ ಸಮಸ್ಯೆ ಶುರುವಾದಂತಿದೆ. ಮೊವಾಡಿ ಭಾಗದ ಜನರಿಗೆ ನೀರು ಪೂರೈಸುತ್ತಿದ್ದ ಬಾವಿ ಕಳೆದ ವರ್ಷ ಕುಸಿದಿದೆ. ಇದರಿಂದ ನೀರು ಪೂರೈಕೆಗೆ ತೊಂದರೆಯಾಗುತ್ತಿದೆ.

ಇಲ್ಲಿನ ನಿವಾಸಿಗಳಿಗೆ ನೀರು ಸರಬರಾಜು ವಾಡಲು ಗ್ರಾಮ ಪಂಚಾಯಿತಿ ಹರಸಾಹಸ ಪಡುತ್ತಿದ್ದು, ಡಿಸೆಂಬರ್ ನಂತರ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವ ಆತಂಕವನ್ನು ಇಲ್ಲಿನ ನಿವಾಸಿಗಳು ವ್ಯಕ್ತಪಡಿಸಿದ್ದಾರೆ. ಮೊವಾಡಿ, ಆನಗೋಡು ಭಾಗದಲ್ಲಿ ಉಪ್ಪು ನೀರಿನ ಸಮಸ್ಯೆಯೂ ಇದೆ. ಬಾವಿಗಳಿದ್ದರೂ ಬೇಸಿಗೆಯಲ್ಲಿ ಅದರ ನೀರು ಬಳಸಲು ಸಾಧ್ಯವಿಲ್ಲದಂತಾಗಿದೆ. ಇದರಿಂದ ಪ್ರತಿ ವರ್ಷ ನೂರಾರು ಮನೆಗಳಿಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಮೊವಾಡಿ ಹಾಗೂ ಆನಗೋಡು ಜನ ಶಾಶ್ವತವಾಗಿ ನೀರಿನ ಸಂಪರ್ಕ ಕಲ್ಪಿಸುವಂತೆ ಮನವಿ ಮಾಡುತ್ತಿದ್ದಾರೆ.

100ಕ್ಕೂ ಅಧಿಕ ಮನೆಗಳಿಗೆ ಸಮಸ್ಯೆ

ಮೊವಾಡಿ ಪರಿಸರದಲ್ಲಿ 100ಕ್ಕೂ ಅಧಿಕ ಮನೆಗಳಿವೆ. ಒಂದಷ್ಟು ಮನೆಗಳಲ್ಲಿ ಬಾವಿಗಳಿವೆ. 2-3 ಸಾರ್ವಜನಿಕ ಬಾವಿಗಳು ಇವೆ. ಆದರೆ ಇಲ್ಲಿನ ನೀರು ಪೂರೈಸುವ ಪಂಚಾಯಿತಿ ಅಧೀನದ ಬಾವಿ ಕುಸಿದಿದ್ದರಿಂದ ಸಮಸ್ಯೆ ಉದ್ಭವವಾಗಿದೆ. ಮೊದಲು 2-3 ಗಂಟೆ ನೀರು ಕೊಡಲಾಗುತ್ತಿತ್ತು. ಆದರೆ ಈಗ ಅದರ ಅರ್ಧದಷ್ಟು ಕೂಡ ನೀರು ಕೊಡುತ್ತಿಲ್ಲ. ಇದರಿಂದ ನಿತ್ಯದ ಬಳಕೆಗೆ, ಎಲ್ಲದಕ್ಕೂ ಸಮಸ್ಯೆಯಾಗುತ್ತಿದೆ ಎಂದು ಸ್ಥಳೀಯರು ಅಲವತ್ತು ತೋಡಿಕೊಂಡಿದ್ದಾರೆ.

ಮೊವಾಡಿಯಲ್ಲಿ ಬಾವಿ ಕುಸಿದಿರುವುದರಿಂದ ನೀರಿನ ಸಮಸ್ಯೆ ಆರಂಭವಾಗಿದೆ. ಇಲ್ಲಿಗೆ ಶಾಶ್ವತ ಪರಿಹಾರ ಕಲ್ಪಿಸದಿದ್ದರೆ, ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆ ಮತ್ತಷ್ಟು ಭೀಕರ ಆಗಲಿದೆ. ಈ ಬಗ್ಗೆ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಪ್ರಜಾಸೇವಾ ಆಂದೋಲನದಲ್ಲೂ ಗಮನಕ್ಕೆ ತರಲಾಗಿದೆ. ಟಾಸ್ಕ್‌ಫೋರ್ಸ್ ಸಭೆಯಲ್ಲೂ ಪ್ರಸ್ತಾಪಿಸಲಾಗಿದೆ.
ಮಿಥುನ್ ದೇವಾಡಿಗ ತ್ರಾಸಿ ಗ್ರಾ.ಪಂ. ಮಾಜಿ ಅಧ್ಯಕ್ಷ
ಮೊವಾಡಿಯಲ್ಲಿ ಕುಡಿಯುವ ನೀರಿನ ಪೂರೈಕೆಗಾಗಿ ಗ್ರಾ.ಪಂ.ನ ವರ್ಗ 1ರ ಅನುದಾನದಲ್ಲಿ 2 ಬೋರ್‌ವೆಲ್ ಹಾಗೂ 1 ಬಾವಿಯನ್ನು ತುರ್ತಾಗಿ ದುರಸ್ತಿ ವಾಡಿ ನೀರು ಕೊಡಲಾಗುತ್ತಿದೆ. ಪ್ರಜಾಸೇವಾ ಆಂದೋಲನದಲ್ಲಿ ಪ್ರಸ್ತಾಪವಾದಂತೆ ಇಲ್ಲಿಗೆ ಹೊಸದಾಗಿ ಬಾವಿ ಹಾಗೂ ಟ್ಯಾಂಕ್ ಬೇಕಾಗಿದ್ದು, ಈ ಬಗ್ಗೆ ಪಂಚಾಯಿತಿಯಿಂದ ಜಿಲ್ಲಾ ಪಂಚಾಯಿತಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಶೋಭಾ ತ್ರಾಸಿ ಪಿಡಿಒ