ಡಾ.ಆರ್.ಕೆ. ನಾಯರ್‌ಗೆ ರೋಟರಿ ವಂದನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಮಂಗಳೂರು : ರೋಟರಿ ಕ್ಲಬ್ ಮಂಗಳೂರು ಸೆಂಟ್ರಲ್ ಮತ್ತು ರೋಟಾರಾಕ್ಟ್ ಕ್ಲಬ್ ಮಂಗಳೂರು ಸಿಟಿ ಜಂಟಿ ಆಶ್ರಯದಲ್ಲಿ ಪ್ರಾಯೋಜಿಸಿದ ರಾಜ್ಯ ಮಟ್ಟದ 23ನೇ ವಾರ್ಷಿಕ ಮತ್ತು 2026ನೇ ಸಾಲಿನ ಪ್ರತಿಷ್ಠಿತ ವಂದನಾ ಪ್ರಶಸ್ತಿಯನ್ನು ಕಾಸರಗೋಡು ಮೂಲದ ಖ್ಯಾತ ಪರಿಸರ ತಜ್ಞ ಮತ್ತು ಹಸಿರು ಕ್ರಾಂತಿ ಮಾಡಿದ ಡಾ.ಆರ್.ಕೆ. ನಾಯರ್ ಅವರಿಗೆ ಶನಿವಾರ ಪ್ರದಾನ ಮಾಡಲಾಯಿತು.
ಸನ್ಮಾನಕ್ಕೆ ಪ್ರತಿಕ್ರಿಯಿಸಿದ ಡಾ.ಆರ್.ಕೆ. ನಾಯರ್ ಅವರು, ತಮ್ಮ ಸಾಧನೆಗೆ ಸರ್ಕಾರದ ಪ್ರೋತ್ಸಾಹ ಮತ್ತು ವೈಯಕ್ತಿಕ ಶ್ರಮ ಕಾರಣ. ಈ ಪ್ರಶಸ್ತಿ ಸ್ವೀಕರಿಸಿದ ಬಳಿಕ ಇನ್ನಷ್ಟು ಸಾಧಿಸಲು ಪ್ರೇರಣೆ ದೊರೆತಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮಾತನಾಡಿ, ಸಾಧಕರನ್ನು ಗುರುತಿಸಿ, ಸನ್ಮಾನಿಸಿ ಪ್ರಶಸ್ತಿ ಪ್ರದಾನ ಮಾಡುವ ರೋಟರಿ ಸಂಸ್ಥೆಯ ನಿಸ್ವಾರ್ಥ ಸಮಾಜಸೇವಾ ಕಾರ್ಯ ಶ್ಲಾಘನೀಯ ಎಂದರು.
ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ಡಾ.ದೇವದಾಸ್ ರೈ ಅವರು ಪ್ರಶಸ್ತಿ ಪ್ರದಾನದ ವಿಧಿ ವಿಧಾನವನ್ನು ನೆರವೇರಿಸಿ, ವಂದನಾ ಪ್ರಶಸ್ತಿಯು ತಮ್ಮ ಸಂಸ್ಥೆಯ ವೃತ್ತಿಪರ ಸೇವಾ ಯೋಜನೆಯ ಅಂಗವಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ, ಅವರು ಸಾಧಿಸಿದ ಸಾಧನೆಯನ್ನು ಪರಿಗಣಿಸಿ ಈ ವಾರ್ಷಿಕ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಸ್ತುತ ಸಾಲಿನ ಪ್ರಶಸ್ತಿ ವಿಜೇತರಾದ ಡಾ. ರಾಧಾಕೃಷ್ಣ ನಾಯರ್ ಅವರು ದೇಶದ 13 ರಾಜ್ಯಗಳಲ್ಲಿನ ಸಾವಿರಾರು ಎಕರೆ ಬಂಜರು ಭೂಮಿಯಲ್ಲಿ 130 ಅರಣ್ಯ ಪ್ರದೇಶಗಳನ್ನು ಜಪಾನ್ ದೇಶದ ಮಿಯಾವಾಕಿ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ ಎಂದರು.
ರೋಟರಾಕ್ಟ್ ಸಂಸ್ಥೆಯ ಅಧ್ಯಕ್ಷ ಅಕ್ಷಯ್ ರೈ ಅವರು ಪ್ರಶಸ್ತಿ ವಿಜೇತರ ಪರಿಚಯ ಮತ್ತು ಪರಿಸರ ಸಂರಕ್ಷಣೆಯಲ್ಲಿ ಜೀವಮಾನ ಸಾಧನೆಗಳ ಮಾಹಿತಿ ನೀಡಿದರು. ಸಹಾಯಕ ಗವರ್ನರ್ ಡಾ.ಚಿನ್ನಗಿರಿ ಗೌಡ ಅಭಿನಂದನಾ ಭಾಷಣ ಮಾಡಿದರು.
ರೋಟರಾಕ್ಟ್ ಸಂಸ್ಥೆಯ ಮೈಸೂರು ನಗರ ಮೂಲದ ಜಿಲ್ಲಾ ಪ್ರತಿನಿಧಿ ಪ್ರಜ್ವಲ್ ಆರ್. ಅವರು ಸಂಸ್ಥೆಯ ಸಾಪ್ತಾಹಿಕ ಗೃಹ ವಾರ್ತಾ ಪತ್ರಿಕೆ ಸೆಂಟೊರ್ ಬಿಡುಗಡೆಗೊಳಿಸಿದರು. ರೋಟರಿ ಮಂಗಳೂರು ಸೆಂಟ್ರಲ್ ಅಧ್ಯಕ್ಷ ಭಾಸ್ಕರ್ ರೈ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ವಿವೇಕ್ ಕೋಟ್ಯಾನ್ ವರದಿ ಮಂಡಿಸಿದರು. ಸಂಸ್ಥೆಯ ಮಾಜಿ ಅಧ್ಯಕ್ಷ ಬ್ರಾಯನ್ ಪಿಂಟೋ, ವಲಯ ಪ್ರತಿನಿಧಿ ರವಿ ಜಲಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಚುನಾಯಿತ ಅಧ್ಯಕ್ಷ ರವೀಂದ್ರ, ಸದಸ್ಯರಾದ ಡಾ. ಶಿವಪ್ರಕಾಶ್ ಮತ್ತು ಜನಾರ್ದನ ಆಳ್ವ ಕಾರ್ಯಕ್ರಮ ಪ್ರಾಯೋಜಿಸಿದ್ದರು.
ಡಾ. ಶೆಲ್ಡನ್ ಕ್ರಾಸ್ತಾ ನಿರೂಪಿಸಿದ ಕಾರ್ಯಕ್ರಮದಲ್ಲಿ ರೋಟರಾಕ್ಟ್ ಸಂಸ್ಥೆಯ ಕಾರ್ಯದರ್ಶಿ ವಿವೇಕ್ ರಾವ್ ವಂದಿಸಿದರು.