ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಡಾ.ರಾಜ್‌ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಮಾತನಾಡಿದರು. 
ದಕ್ಷಿಣ ಕನ್ನಡ

ಡಾ.ರಾಜ್‌ಕುಮಾರ್ ಯುವಜನತೆಗೆ ಪ್ರೇರಣೆ

ಮಂಗಳೂರು: ವರನಟ, ನಟಸಾರ್ವಭೌಮ ಎಂದೇ ಬಿರುದು ಪಡೆದ ಡಾ.ರಾಜ್‌ಕುಮಾರ್ ಅವರ ಸರಳ ವ್ಯಕ್ತಿತ್ವ ಯುವಜನತೆಗೆ ಪ್ರೇರಣೆ. ಇಂದಿನ ಯುವಜನತೆ ಅವರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ ಗಫೂರ್ ಹೇಳಿದರು.
ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಸ್ನಾತಕೋತ್ತರ ವಾಣಿಜ್ಯ ವಿಭಾಗ ಆಶ್ರಯದಲ್ಲಿ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಡಾ.ರಾಜ್‌ಕುಮಾರ್ ಅವರ 97ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಜ್‌ಕುಮಾರ್ ಅವರು ಸರಳತೆ ಮತ್ತು ಉತ್ತಮ ಮೌಲ್ಯಗಳನ್ನು ತಮ್ಮ ಜೀವನದುದ್ದಕ್ಕೂ ಅಳವಡಿಸಿಕೊಂಡಿದ್ದರು. ಕನ್ನಡ ಚಲನಚಿತ್ರ ರಂಗದಲ್ಲಿ ವಿಶೇಷವಾಗಿ ಗುರುತಿಸಿಕೊಂಡಿದ್ದ ಡಾ.ರಾಜ್‌ಕುಮಾರ್ ಅವರ ಜನ್ಮ ದಿನವನ್ನು ಸರ್ಕಾರ ಆಚರಿಸುತ್ತಿರುವುದು ಶ್ಲಾಘನೀಯ. ಯುವಜನತೆ ಸನ್ಮಾರ್ಗದಲ್ಲಿ ನಡೆದರೆ ಉತ್ತಮ ಪ್ರಜೆಗಳಾಗಿ ಭವಿಷ್ಯ ರೂಪಿಸಿಕೊಳ್ಳಬಹುದು ಎಂದರು.
ಹಿರಿಯ ಪತ್ರಕರ್ತ ಪಿ.ಬಿ ಹರೀಶ್ ರೈ ಉಪನ್ಯಾಸ ನೀಡಿ ಮಾತನಾಡಿ, ಡಾ.ರಾಜ್‌ಕುಮಾರ್ ಅವರು ಕನ್ನಡ ನಾಡು ಸಮೃದ್ಧಗೊಳಿಸಿದ ಮಹಾನ್ ನಾಯಕ. ಅಭಿಮಾನಿಗಳು ತಮ್ಮ ಆದರ್ಶಗಳನ್ನು ಹಿಂಬಾಲಿಸುವ ಕಾರಣದಿಂದ ತಾವು ನಟಿಸಿದ ಸಿನಿಮಾಗಳಲ್ಲಿ ಧೂಮಪಾನ, ಮದ್ಯಪಾನದ ದೃಶ್ಯವನ್ನು ಅಭಿನಯಿಸಲಿಲ್ಲ. ಚಲನಚಿತ್ರದಲ್ಲಿ ಮಾತ್ರವಲ್ಲದೆ ಅವರು ನಿಜ ಜೀವನದಲ್ಲಿಯೂ ನಾಯಕರಾಗಿದ್ದು, ಅಭಿನಯವನ್ನು ನಿಜ ಜೀವನದಲ್ಲಿಯೂ ತೋರಿಸಿದವರು ಎಂದರು.
ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.. ಗಣಪತಿ ಗೌಡ ಎಸ್ ಅಧ್ಯಕ್ಷತೆ ವಹಿಸಿದ್ದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟಾನ್ಲಿ ಅಲ್ವಾರಿಸ್ ಉಪಸ್ಥಿತರಿದ್ದರು. ವಿಶ್ವವಿದ್ಯಾನಿಲಯ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಸಲಹೆಗಾರ ಡಾ. ಅಬೂಬಕ್ಕರ್ ಸಿದ್ದಿಕ್ ಸ್ವಾಗತಿಸಿದರು, ಜಿಲ್ಲಾ ವಾರ್ತಾಧಿಕಾರಿ ಬಿ.ಎ ಖಾದರ್ ಶಾ ವಂದಿಸಿದರು. ಸ್ನಾತಕೋತ್ತರ ವಾಣಿಜ್ಯ ಉಪನ್ಯಾಸಕ ಡಾ. ವೆಂಕಟೇಶ್ ನಾಯಕ್ ನಿರೂಪಿಸಿದರು.