ಡಾ.ಎಂ.ಎನ್.ರಾಜೇಂದ್ರ ಕುಮಾರ್
ಮಂಗಳೂರು: ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ನೀಡುವ ಎಂಎಂಎ-ಕೆವಿಕೆ ಅತ್ಯತ್ತಮ ವ್ಯವಸ್ಥಾಪಕ ಪ್ರಶಸ್ತಿ 2025ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಆಯ್ಕೆಯಾಗಿದ್ದಾರೆ.
ನಗರದ ಎಸ್‌ಡಿಎಂ ಕಾಲೇಜಿನ ಸಭಾಂಗಣದಲ್ಲಿ ಮಾ.28ರಂದು ಸಂಜೆ 6 ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಅಸೋಸಿಯೇಶನ್ ಅಧ್ಯಕ್ಷ ಎಡ್ವರ್ಡ್ ಜೆ.ಕೊಯೆಲ್ಲೋ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1982-84ರ ಅವಧಿಯಲ್ಲಿ ಸಂಘದ ಅಧ್ಯಕ್ಷರಾಗಿದ್ದ ದಿ.ಕೆ.ವಿಶ್ವನಾಥ ಕಾಮತ್ ಅವರ ಹೆಸರಿನಲ್ಲಿ 1997ರಲ್ಲಿ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿಯನ್ನು ಆರಂಭಿಸಲಾಗಿದೆ. ಎಎಂಎ-ಕೆವಿಕೆ ಅತ್ಯುತ್ತಮ ವ್ಯವಸ್ಥಾಪಕ ಪ್ರಶಸ್ತಿಯನ್ನು ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗೆ ವಿಶಿಷ್ಟವಾದ ಕೊಡುಗೆಗಳನ್ನು ನೀಡದ ಗಣ್ಯ ವ್ಯಕ್ತಿಗೆ ನೀಡಲಾಗುವುದು.
ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ವೃತ್ತಿಪರ ಸಂಘವಾಗಿದೆ. ಇದು ಆಲ್ ಇಂಡಿಯಾ ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ನವದೆಹಲಿಗೆ ಸಂಯೋಜಿತವಾಗಿದೆ. ಇದು ದೇಶದಲ್ಲಿ ಮ್ಯಾನೇಜ್‌ಮೆಂಟ್ ವೃತ್ತಿಯ ರಾಷ್ಟ್ರೀಯ ಉನ್ನತ ಸಂಸ್ಥೆಯಾಗಿದೆ. 1979ರಲ್ಲಿ ಕರ್ಣಾಟಕ ಬ್ಯಾಂಕ್ ಲಿಮಿಟೆಡ್‌ನ ಅಂದಿ ಅಧ್ಯಕ್ಷ ದಿ.ಕೆ.ಎನ್.ಬಾಸ್ರಿ ಅವರು ಮಂಗಳೂರು ಮ್ಯಾನೇಜ್‌ಮೆಂಟ್ ಅಸೋಸಿಯೇಶನ್ ಪ್ರಾರಂಭಿಸಿದರು. ಪ್ರಸ್ತುತ ಸಂಘ 600ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ. ಸದಸ್ಯರ ಅನುಕೂಲಕ್ಕಾಗಿ ನಿಯೋಜಿತ ಉಪನ್ಯಾಸ ಸಭೆಗಳು, ಕಾರ್ಯಾಗಾರಗಳು ಮತ್ತು ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ ಎಂದವರು ಹೇಳಿದರು.