ಪ್ರೊ.ಫೆಮಿಡಾ ಹ್ಯಾಂಡಿ ಅವರು ಡಾ.ಎಂ.ಎನ್.ರಾಜೇಂದ್ರ ಕುಮಾರ್‌ಗೆ ವಿಷನರಿ ಲೀಡರ್‌ಶಿಪ್ ಅವಾರ್ಡ್ ಪ್ರದಾನ ಮಾಡಿದರು.
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ ಸಹಕಾರಿ ಬ್ಯಾಂಕ್ ಅಧ್ಯಕ್ಷ, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಸ್ಥಾಪಕ ಟ್ರಸ್ಟಿ, ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರಕುಮಾರ್ ಅವರು ಮಹಿಳಾ ಸಬಲೀಕರಣದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಮಂಗಳವಾರ ಅಮೇರಿಕಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ವತಿಯಿಂದ ‘ವಿಷನರಿ ಲೀಡರ್‌ಶಿಪ್ ಅವಾರ್ಡ್’ ನೀಡಿ ಗೌರವಿಸಿದೆ.
ಜನಸಾಮಾನ್ಯರಲ್ಲಿ ಆರ್ಥಿಕಾಭಿವೃದ್ಧಿಯ ಛಾಪನ್ನು ಮೂಡಿಸಿರುವ ನವೋದಯ ಸ್ವ ಸಹಾಯ ಗುಂಪುಗಳ ಕಾರ್ಯ ದಕ್ಷತೆ ಹಾಗೂ ಸಂಘಟನೆಯ ವಿಶೇಷ ಅಧ್ಯಯನಕ್ಕೆ ಪ್ರತಿಷ್ಠಿತ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನ ತಂಡ ಮಂಗಳೂರಿನ ಎಸ್‌ಸಿಡಿಸಿಸಿ ಬ್ಯಾಂಕಿಗೆ ಆಗಮಿಸಿತು. ಈ ಸಂದರ್ಭ ವಿಶ್ವವಿದ್ಯಾಲಯದ ಪ್ರೊ.ಫೆಮಿಡಾ ಹ್ಯಾಂಡಿ ಅವರು ಡಾ.ಎಂ.ಎನ್.ರಾಜೇಂದ್ರ ಕುಮಾರ್‌ಗೆ ವಿಷನರಿ ಲೀಡರ್‌ಶಿಪ್ ಅವಾರ್ಡ್ ಪ್ರದಾನ ಮಾಡಿದರು.
ಬಳಿಕ ಮಾತನಾಡಿದ ಪ್ರೊ.ಫೆಮಿಡಾ ಹ್ಯಾಂಡಿ, ಡಾ.ರಾಜೇಂದ್ರ ಕುಮಾರ್ ನವೋದಯ ಸ್ವಸಹಾಯ ಸಂಘ ಚಳವಳಿಯ ಮೂಲಕ ಹಿಂದುಳಿದ ವರ್ಗಗಳ, ವಿಶೇಷವಾಗಿ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸಿದ್ದಾರೆ. ಅಸಂಖ್ಯಾತ ಬಡ ಮಹಿಳೆಯರ ಕುಟುಂಬವನ್ನು ಬೆಳಗಿಸಿದ ಧೀಮಂತ ವ್ಯಕ್ತಿತ್ವ ಅವರದ್ದಾಗಿದೆ. ಅವರ ದೂರದೃಷ್ಟಿ ಹಾಗೂ ಸೇವಾ ಮನೋಭಾವನೆಯನ್ನು ಗೌರವಿಸಿ, ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದರು.
ಈ ಸಂದರ್ಭ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ,ಅಮೆರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ತಂಡ ಪ್ರೊ.ಫೆಮಿಡಾ ಹ್ಯಾಂಡಿ ಅವರ ನೇತೃತ್ವದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್‌ಗೆ 15 ವರ್ಷಗಳಿಂದ ನಿರಂತರವಾಗಿ ಭೇಟಿ ನೀಡುತ್ತಿದೆ. ಸ್ವಸಹಾಯ ಸಂಘಗಳ ಮೂಲಕ ಜಾರಿಗೊಳಿಸಿರುವ ಮಹಿಳಾ ಸಬಲೀಕರಣ ಹಾಗೂ ಸೂಕ್ಷ್ಮ ಹಣಕಾಸು (ಮೈಕ್ರೋ ಫೈನಾನ್ಸ್) ಮಾದರಿಯ ಯಶಸ್ಸನ್ನು ಅಧ್ಯಯನ ಮಾಡುತ್ತಿದೆ ಎಂದರು.
ವಿಶ್ವದ ಅಗ್ರಗಣ್ಯ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ತಂಡದ ನಿರಂತರ ಭೇಟಿ, ಎಸ್‌ಸಿಡಿಸಿಸಿ ಬ್ಯಾಂಕ್ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟಬಲ್ ಟ್ರಸ್ಟ್‌ಗಳು ಗ್ರಾಮೀಣ ಮಟ್ಟದಲ್ಲಿ ನಡೆಸುತ್ತಿರುವ ನೈಜ ಹಾಗೂ ಪರಿಣಾಮಕಾರಿ ಕಾರ್ಯಗಳಿಗೆ ದೊರೆತ ಮಹತ್ವದ ಮಾನ್ಯತೆಯಾಗಿದೆ ಎಂದರು.
ಹಿಂದುಳಿದ ವರ್ಗಗಳ, ವಿಶೇಷವಾಗಿ ಮಹಿಳೆಯರ ಜೀವನಮಟ್ಟವನ್ನು ಸುಧಾರಿಸುವ ಉದ್ದೇಶದಿಂದ ಕೈಗೊಂಡಿರುವ ನಮ್ಮ ಮುಂದಾಳತ್ವಗಳನ್ನು ಗುರುತಿಸಿರುವುದಕ್ಕೆ ನಾನು ವಿನಮ್ರನಾಗಿದ್ದೇನೆ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ. ಭವಿಷ್ಯದಲ್ಲಿ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ನಡುವಿನ ಈ ಶೈಕ್ಷಣಿಕ ಹಾಗೂ ಸಾಮಾಜಿಕ ಸಹಕಾರವನ್ನು ಇನ್ನೂ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಆಶಯವಿದೆ ಎಂದು ಅವರು ಹೇಳಿದರು.
ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದ ಅಧ್ಯಯನ ತಂಡ ಪ್ರೊ.ಫೆಮಿಡಾ ಹ್ಯಾಂಡಿ, ಪ್ರೊ.ಲ್ಯೂಕಸ್ ವಿನೋದ್ ದೀಕ್ಷಿತ್, ನಿಕೋಲ್, ಅಲೆಸ್ಸಾಂಡ್ರೊ (ಅಲೆಕ್ಸ್), ಅಬಿಗೈಲ್ (ಪ್ರೊಫೆಸರ್ ಫೆಮಿಡಾ ಅವರ ಬೋಧನಾ ಸಹಾಯಕ), ಬಿಜಾನ್ ಚಾನೆಲ್ ಆಂಡರ್ಸನ್, ಗ್ರೇಸ್ ಕ್ಯಾಂಪ್ಬೆಲ್, ಎಲಿಷಾ ಚೋಯ್, ಎಮ್ಮಾ ಕ್ಲಾರ್ಕ್, ಜೆನ್ನಿ ಬೆತ್, ಕ್ರಿಸ್ಟಾ ಸ್ಮಿತ್, ಮಂಡಿಸಾ ಥಾಮಸ್, ಎಲಿಜಬೆತ್ ರೀಲಿ, ಎಸ್‌ಸಿಡಿಸಿಸಿ ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ , ಬ್ಯಾಂಕ್ ನಿರ್ದೇಶಕರುಗಳಾದ ಎಂ.ವಾದಿರಾಜ ಶೆಟ್ಟಿ , ಶಶಿಕುಮಾರ್ ರೈ ಬಾಲ್ಯೋಟ್ಟು , ಸದಾಶಿವ ಉಳ್ಳಾಲ್, ಎಸ್.ಬಿ. ಜಯರಾಮ್ ರೈ, ಅಶೋಕ್ ಕುಮಾರ್ ಶೆಟ್ಟಿ, ಎಂ.ಮಹೇಶ್ ಹೆಗ್ಡೆ, ಕೆ.ಜೈರಾಜ್ ಬಿ.ರೈ, ರಾಜೇಶ್ ರಾವ್, ಸದಾಶಿವ ಉಳ್ಳಾಲ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಗೋಪಾಲಕೃಷ್ಣ ಭಟ್, ನವೋದಯ ಗ್ರಾಮ ವಿಕಾಸ ಚಾರಿಟೆಬಲ್ ಟ್ರಸ್ಟ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮತ್ತಿತರರಿದ್ದರು.