ಬಂಟ್ವಾಳ: ಅಮ್ಟಾಡಿ ಗ್ರಾಮದ ಕಜಿಪಿತ್ಲು ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ಬೆಕ್ಕು ಹಾಗೂ ನಾಯಿಗಳು ನಾಪತ್ತೆಯಾಗುತ್ತಿರುವುದು ಗ್ರಾಮಸ್ಥರಲ್ಲಿ ಆತಂಕಕ್ಕೆ ಕಾರಣವಾಗಿದೆ. ಒಂದರ ಹಿಂದೆ ಒಂದರಂತೆ ಸಾಕುಪ್ರಾಣಿಗಳು ಕಾಣೆಯಾಗುತ್ತಿದ್ದಂತೆ, ಯಾವುದೋ ಕಾಡುಪ್ರಾಣಿ ಅವುಗಳನ್ನು ಹೊತ್ತೊಯ್ಯುತ್ತಿರಬಹುದು ಎಂಬ ಅನುಮಾನ ಸ್ಥಳೀಯರಲ್ಲಿ ಮೂಡಿತ್ತು.
ಈ ನಡುವೆ ಭಾನುವಾರ ತಡರಾತ್ರಿ ದೊಡ್ಡ ಗಾತ್ರದ ಹೆಬ್ಬಾವೊಂದು ಬೆಕ್ಕನ್ನು ಹಿಡಿದು ಪೊದೆಯೊಳಗೆ ಕೊಂಡೊಯ್ಯುತ್ತಿರುವುದು ಕಂಡುಬಂದಿದೆ ಎನ್ನಲಾಗಿದೆ. ಈ ಘಟನೆ ಗ್ರಾಮಸ್ಥರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಈಗಾಗಲೇ ಹಲವಾರು ಬೆಕ್ಕುಗಳು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ, ಈ ಹೆಬ್ಬಾವು ಇದೇ ಪರಿಸರದಲ್ಲಿ ಬೀಡುಬಿಟ್ಟಿರಬಹುದೇ ಎಂಬ ಆತಂಕ ಸ್ಥಳೀಯರನ್ನು ಕಾಡುತ್ತಿದೆ. ಜನವಸತಿ ಪ್ರದೇಶದ ಸಮೀಪವೇ ಬೃಹತ್ ಹೆಬ್ಬಾವು ಕಾಣಿಸಿಕೊಂಡಿರುವುದರಿಂದ, ಸಾಕುಪ್ರಾಣಿಗಳ ಸುರಕ್ಷತೆಯ ಬಗ್ಗೆ ಗ್ರಾಮಸ್ಥರು ಚಿಂತಿತರಾಗಿದ್ದು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.