ಸತೀಶ್ ಪ್ರಭು  
ದಕ್ಷಿಣ ಕನ್ನಡ

ದ.ಕ ಜಿಲ್ಲಾ ಬಿಜೆಪಿ ವಕ್ತಾರ ಸತೀಶ್ ಪ್ರಭು ನಿಧನ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡರಾಗಿದ್ದ ಸತೀಶ್ ಪ್ರಭು ಮಂಗಳವಾರ ನಿಧನ ಹೊಂದಿದ್ದಾರೆ. ಅವರು ಪತ್ನಿ ಹಾಗೂ ಪುತ್ರನನ್ನು ಅಗಲಿದ್ದಾರೆ.
ಬೆಳಿಗ್ಗೆ ಏಕಾಏಕಿ ಬ್ರೈನ್ ಹ್ಯಾಮರೇಜ್‌ಗೆ ಒಳಗಾದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಧ್ಯಾಹ್ನ ವೇಳೆಗೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಸತೀಶ್ ಪ್ರಭು ಅವರು ಪ್ರಸ್ತುತ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿಯ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಆರ್‌ಎಸ್‌ಎಸ್ ಸಂಘಟನೆಯ ಹಿರಿಯ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು.
ಮಂಗಳೂರಿನ ಪ್ರಸಿದ್ಧ ಕಾರ್ ಸ್ಟ್ರೀಟ್ ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಸಂಘನಿಕೇತನದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ ವತಿಯಿಂದ ಆಯೋಜಿಸಲಾಗುವ ಗಣೇಶೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದರು. ರಾಜಕೀಯ ಜೀವನದಲ್ಲಿ ಒಂದು ಹಂತದಲ್ಲಿ ಅವರು ಬಿಜೆಪಿ ತೊರೆದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಕ್ಕೆ ಸೇರಿದ್ದರು. ನಂತರ ಮತ್ತೆ ಬಿಜೆಪಿಗೆ ಮರಳಿ ಸಂಘಟನೆಯಲ್ಲಿ ಸಕ್ರಿಯರಾಗಿದ್ದರು. ಸತೀಶ್ ಪ್ರಭು ಅವರ ನಿಧನಕ್ಕೆ ರಾಜಕೀಯ ಹಾಗೂ ಸಾಮಾಜಿಕ ವಲಯ ಸಂತಾಪ ಸೂಚಿಸಿದೆ.