ಬಿಜೆಪಿಯಿಂದ ಬೃಹತ್ ಹಕ್ಕೊತ್ತಾಯ ಪಾದಯಾತ್ರೆ ಬಳಿಕ ಪಂಚಾಯಿತಿ ಆವರಣದಲ್ಲಿ ಆಯೋಜಿಸಲಾದ ಸಭೆಯಲ್ಲಿ ಶಾಸಕ ಡಾ.ಭರತ್ ಶೆಟ್ಟಿ ಮಾತನಾಡಿದರು. ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಮೊದಲಾದವರಿದ್ದರು. 
ದಕ್ಷಿಣ ಕನ್ನಡ

ಕಾಂಗ್ರೆಸ್‌ನಲ್ಲೇ ‘ಗ್ಯಾರಂಟಿ’ ಅಸಮಾಧಾನ

ಗುರುಪುರದಲ್ಲಿ ಬಿಜೆಪಿ ‘ಹಕ್ಕೊತ್ತಾಯ’ ಪಾದಯಾತ್ರೆ

ಗುರುಪುರ: ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ವಿಫಲವಾಗಿದ್ದರೆ, ವಿಧವಾ ವೇತನ ಮತ್ತು ವೃದ್ಧಾಪ್ಯ ವೇತನ ಸಂಪೂರ್ಣ ಸ್ಥಗಿತಗೊಂಡಿದೆ. ಸರ್ಕಾರದ ಪ್ರತಿಯೊಂದು ಜನಪರ ಸೇವೆಗಳ ವೆಚ್ಚ ದುಬಾರಿಯಾಗಿದೆ. ಬಡವರು ಮತ್ತು ಮಧ್ಯಮ ವರ್ಗದ ಜನರ ಶೋಷಣೆ ಎಲ್ಲೆ ಮೀರಿದ್ದು, ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಕಾಂಗ್ರೆಸ್ ವಲಯದಲ್ಲೇ ಅಪಸ್ವರಗಳು ಕೇಳಿ ಬರುತ್ತಿವೆ ಎಂದು ಶಾಸಕ ಡಾ.ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಮಂಗಳೂರು ಉತ್ತರ ಮಂಡಲ ವತಿಯಿಂದ ಬುಧವಾರ ಪೊಳಲಿ ದ್ವಾರದಿಂದ ಗುರುಪುರ ಗ್ರಾಪಂ ಕಚೇರಿವರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಜನಾಂದೋಲನ ‘ನಮ್ಮ ಹಕ್ಕು ನಮಗೆ ನೀಡಿ’ ಬೃಹತ್ ಹಕ್ಕೊತ್ತಾಯ ಪಾದಯಾತ್ರೆ ಬಳಿಕ ಆಯೋಜಿಸಲಾದ ಸಭೆಯನ್ನುದ್ದೇಶಿಸಿ ಮಾತನಾಡಿದರು.

ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ರಾಜೇಶ್ ಕೊಟ್ಟಾರಿ ಮಾತನಾಡಿದರು. ಕಾರ್ಯದರ್ಶಿ ಸಚಿನ್ ಅಡಪ ಸ್ವಾಗತಿಸಿದರು. ಗುರುಪುರ ಗ್ರಾಪಂ ನಿಕಟಪೂರ್ವ ಸದಸ್ಯ ಸುನೀಲ್ ಪ್ರಸ್ತಾವಿಸಿದರು. ಸಭೆಯಲ್ಲಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ರಣದೀಪ್ ಕಾಂಚನ್, ಸಂದೀಪ್ ಪಚ್ಚನಾಡಿ, ಗುರುಪುರ ಶಕ್ತಿ ಕೇಂದ್ರ ಅಧ್ಯಕ್ಷ ಶ್ರೀಕರ ಶೆಟ್ಟಿ, ಅಡ್ಡೂರು ಶಕ್ತಿ ಕೇಂದ್ರದ ಅಧ್ಯಕ್ಷ ಜಿತೇಶ್ ಶೆಟ್ಟಿ, ಬಿಜೆಪಿ ಘಟಕಗಳ ಪದಾಧಿಕಾರಿಗಳು, ಪಕ್ಷ ಕಾರ್ಯಕರ್ತರು ಇದ್ದರು. ಅಡ್ಯಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಅಜಿತ್ ಶೆಟ್ಟಿ ನಿರೂಪಿಸಿದರು.