ಮಂಗಳೂರು : ಮುಂಬೈ ಸಿಸಿಬಿ ಪೊಲೀಸನೆಂದು ಪರಿಚಯಿಸಿಕೊಂಡು ‘ಡಿಜಿಟಲ್ ಅರೆಸ್ಟ್‘ ಹೆಸರಿನಲ್ಲಿ ವ್ಯಕ್ತಿಯೋರ್ವರಿಗೆ 41.85 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ.
ವ್ಯಕ್ತಿಯೋರ್ವರಿಗೆ(ದೂರುದಾರ) ಜ.31ರಂದು ಯಾರೋ ಅಪರಿಚಿತ ವ್ಯಕ್ತಿ ಹೊಸದಿಲ್ಲಿಯಿಂದ 8796142545 ರಿಂದ ಕರೆ ಮಾಡಿ ಆತನನ್ನು ಸಿಸಿಬಿ ಪೊಲೀಸ್ ಎಂದು ಪರಿಚಯಿಸಿಕೊಂಡಿದ್ದ. ‘ನಿಮ್ಮ ಗುರುತಿನ ಚೀಟಿ ಉಪಯೋಗಿಸಿಕೊಂಡು ಮುಂಬೈನಲ್ಲಿ ಕೆನರಾ ಬ್ಯಾಂಕ್ ನಲ್ಲಿ ಖಾತೆಯನ್ನು ತೆರೆದಿದ್ದು ಅದರಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆಯುತ್ತಿದೆ. ಗುರುತಿನ ಚೀಟಿಯ ನಂಬರ್ ನ್ನು ಉಪಯೋಗಿಸಿಕೊಂಡು ಮೊಬೈಲ್ ನಂಬರ್ ನ್ನು ಪಡೆದುಕೊಳ್ಳಲಾಗಿದೆ. ಕೆನರಾ ಬ್ಯಾಂಕ್ ನಲ್ಲಿ ಖಾತೆ ತರೆದು ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. ನಿಮ್ಮನ್ನು ಬಂಧಿಸಲಾಗುವುದು. ಬಂಧನಕ್ಕೆ ಸುಪ್ರಿಂ ಕೋರ್ಟ್ ವಾರೆಂಟ್ ಆಗಿದೆ‘ ಎಂದು ಹೇಳಿ ವಾಟ್ಸ್ ಆ್ಯಪ್ ಮೂಲಕ ವಿಡಿಯೋ ಕಾಲ್ ನಲ್ಲಿದ್ದು ತನಿಖೆಗೆ ಸಹಕರಿಸಬೇಕಾಗಿ ತಿಳಿಸಿದ. ಇಲ್ಲವಾದಲ್ಲಿ ಕೂಡಲೇ ಬಂಧಿಸುವುದಾಗಿಯೂ ಈ ವಿಚಾರವನ್ನು ಮಗ ಹಾಗೂ ಹಾಗೂ ಹೆಂಡತಿಗೆ ತಿಳಿಸದಂತೆಯೂ ಹೆದರಿಸಿದ್ದ. ಅನಂತರ ದೂರುದಾರರ ಎಲ್ಲಾ ವೈಯಕ್ತಿಕ ವಿವರಗಳು ಮತ್ತು ಬ್ಯಾಂಕ್ ನ ವಿವರಗಳನ್ನು ಪಡೆದುಕೊಂಡಿದ್ದ. ಬಂಧನದಿಂದ ಪಾರಾಗಬೇಕಾದರೆ ಬ್ಯಾಂಕ್ ಖಾತೆಗಳ ಪರಿಶೀಲನೆ ಮಾಡಬೇಕು ಎಂದು ತಿಳಿಸಿದ. ಬ್ಯಾಂಕ್ ಖಾತೆಯಲ್ಲಿರುವ ಹಣದ ಪರಿಶೀಲನೆ ಮುಗಿಯುವವರೆಗೂ ಅದನ್ನು ವರ್ಗಾಯಿಸುವಂತೆ ತಿಳಿಸಿದ. ಈ ವಿಷಯಯನ್ನು ಯಾರಿಗೂ ತಿಳಿಸಬಾರದೆಂದು ಭಯ ಹುಟ್ಟಿಸಿದ್ದ. ಅದರಂತೆ ದೂರದಾರರು ಅಪರಿಚಿತ ವ್ಯಕ್ತಿ ನೀಡಿದ ಬ್ಯಾಂಕ್ ಖಾತೆಗಳಿಗೆ ಫೆ.9ರಿಂದ ಫೆ.18ರವರೆಗೆ ಒಟ್ಟು 41.85 ಲಕ್ಷ ರೂ. ಗಳನ್ನು ವರ್ಗಾವಣೆ ಮಾಡಿದ್ದಾರೆ. ಈ ಬಗ್ಗೆ ಮಂಗಳೂರಿನ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.