ವಿಜಯವಾಣಿ ಸುದ್ದಿಜಾಲ ಮೂಲ್ಕಿ
ಸಮಾಜ ಸಂಘಟಿತವಾಗಿ ಬೆಳೆಯುವ ಜತೆಗೆ ಯುವಜನರಿಗೆ ಪ್ರೇರಣಾದಾಯಕವಾಗಿ ಸೇವಾ ಮನೋಭಾವದಿಂದ ಮುನ್ನಡೆದರೆ ಅಭಿವೃದ್ಧಿ ಸಾಧ್ಯ ಎಂದು ಮೂಲ್ಕಿ ಚರ್ಚ್ ಪ್ರಧಾನ ಧರ್ಮಗುರು ಆಂಟನಿ ಶೇರಾ ಹೇಳಿದರು.
ಮೂಲ್ಕಿ ಕಾರ್ನಾಡು ಇಮ್ಮಾಕ್ಯುಲೆಟ್ ಕನ್ಸೆಪ್ಸನ್ ಚರ್ಚ್, ನೂತನ ದೇವಾಲಯವನ್ನು ನಿರ್ಮಿಸಿ 25ನೇ ವರ್ಷದ ಬೆಳ್ಳಿ ಹಬ್ಬದ ಆಚರಣೆ, ಇಗರ್ಜಿಯ ಕ್ರೈಸ್ತ ಸಮುದಾಯದ ದಿನಾಚರಣೆ ಪ್ರಯುಕ್ತ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಂಜಾನೆ ವಿಶೇಷ ಪೂಜೆಯೊಂದಿಗೆ ಆರಂಭಗೊಂಡ ಬೆಳ್ಳಿ ಹಬ್ಬದ ಕಾರ್ಯಕ್ರಮದಲ್ಲಿ ಕ್ರೈಸ್ತ ಸಮುದಾಯದ ದಿನಾಚರಣೆಯ ಧಾರ್ಮಿಕ ಸಭಾ ಕಾರ್ಯಕ್ರಮ ಆರಂಭಿಸಲಾಯಿತು. ನೂರಾರು ವರ್ಷಗಳಿಂದ ಈ ಚರ್ಚ್ನಲ್ಲಿ ಸೇವೆ ಸಲ್ಲಿಸಿ ನಿಧನರಾದ ಧರ್ಮಗುರು, ಧರ್ಮ ಸಭಾ ಸದಸ್ಯರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ನೂತನ ಚರ್ಚ್ ನಿರ್ಮಾಣದ ಬಳಿಕ 25 ವರ್ಷ ಸೇವೆ ಸಲ್ಲಿಸಿದ ಗುರುಗಳಲ್ಲಿ ಫ್ರಾನ್ಸಿಸ್ ಕ್ಷೇವಿಯರ್ ಗೋಮ್ಸ್, ಸಿಲ್ವೆಸ್ಟರ್ ಡಿ’ಕೋಸ್ಟ ಅವರನ್ನು ಗೌರವಿಸಲಾಯಿತು. ಪ್ರಧಾನ ಧರ್ಮಗುರು ಆಂಟನಿ ಶೆರಾ ಅಧ್ಯಕ್ಷತೆ ವಹಿಸಿದ್ದರು. ಡಿವೈನ್ ಕಾಲ್ ಸೆಂಟರ್ ನಿರ್ದೇಶಕ ಅನಿಲ್ ಕಿರಣ್ ಲೊಬೋ, ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೇಮ್ಸ್ ಡಿಸೋಜ, ಕಾರ್ಯದರ್ಶಿ ಸುರೇಶ್ ಪಿರೇರಾ, ಚರ್ಚ್ ಆಯೋಗಗಳ ಸಂಯೋಜಕ ಪಾವ್ಲ್ ರೋಲ್ಟಿ ಡಿಕೋಸ್ಟ, ಧರ್ಮಭಗಿನಿಯವರಾದ ಸಿ.ಮೀನಾ, ಸಿ.ಸೆವಿನ್, ಚರ್ಚ್ ವಾರ್ಡ್ಗಳ ಗುರಿಕಾರರು, ಪ್ರತಿನಿಧಿಗಳು, ಸರ್ವ ಕ್ರೈಸ್ತರು ಭಾಗವಹಿಸಿದರು. ಆಯೋಗಗಳ ಸಂಯೋಜಕರಾದ ರೋಲ್ಟಿ ಡಿಕೋಸ್ಟ ಪ್ರಾಸ್ತಾವಿಕ ಮಾತನಾಡಿದರು. ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಜೇಮ್ಸ್ ಡಿಸೋಜ ಸ್ವಾಗತಿಸಿದರು. ಸುರೇಶ್ ಪಿರೇರಾ ವಂದಿಸಿದರು. ಲವಿಟಾ, ಲವಿಶ, ಪ್ರಿನ್ಸಿಟ, ಫ್ರಾನ್ಸಿಸ್ ಡಿಕುನ್ಹಾ ಕಾರ್ಯಕ್ರಮ ನಿರ್ವಹಿಸಿದರು.