crime 
ದಕ್ಷಿಣ ಕನ್ನಡ

ಪಡಿತರ ಸಾಮಗ್ರಿ ಅನಧಿಕೃತ ಸಾಗಾಟ ಪತ್ತೆ

ಸರ್ಕಾರದ ಬೊಕ್ಕಸಕ್ಕೆ 15.72 ಕೋಟಿ ರೂ. ನಷ್ಟ

ಕಾಸರಗೋಡು: ಬಡ ಜನತೆಗೆ ವಿತರಿಸಬೇಕಾದ ಪಡಿತರ ಧಾನ್ಯ ಸೇರಿದಂತೆ ಕಾಸರಗೋಡು ಸಹಿತ ರಾಜ್ಯದ ವಿವಿಧ ಸರ್ಕಾರಿ ಗೋದಾಮುಗಳಿಂದ 5368.87 ಟನ್ ಪಡಿತರ ಸಾಮಗ್ರಿಯನ್ನು ಅಕ್ರಮವಾಗಿ ಸಾಗಿಸಿರುವುದು ನಾಗರಿಕ ಪೂರೈಕೆ ಇಲಾಖೆಯ ತನಿಖೆಯಲ್ಲಿ ಬಹಿರಂಗಗೊಂಡಿದೆ. ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ 15.72 ಕೋಟಿ ರೂ. ನಷ್ಟ ಉಂಟಾಗಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

ವರದಿ ಹೊರಬೀಳುತ್ತಿದ್ದಂತೆ ಇದಕ್ಕೆ ಕಾರಣರಾದ ನಾಗರಿಕ ಪೂರೈಕೆ ಇಲಾಖೆಯ 34 ಸಿಬ್ಬಂದಿಯನ್ನು ಅವಾನತುಗೊಳಿಸಲಾಗಿದೆ. ತನಿಖಾ ವರದಿಯನ್ನು ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಅನೂಪ್ ಜೇಕಬ್ ಅವರಿಗೆ ಸಲ್ಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಎಂಟು ಕಡೆಗಳಲ್ಲಿ ಪೊಲೀಸರು ಈಗಾಗಲೇ ಪ್ರಕರಣ ದಾಖಲಿಸಿಕೊಂಡಿದ್ದು, ವಿಜಿಲೆನ್ಸ್ ವಿಭಾಗವೂ ಪ್ರತ್ಯೇಕ ಪ್ರಕರಣ ದಾಖಲಿಸಿದೆ.

ಕಾಸರಗೋಡು ಜಿಲ್ಲೆಯ ಗೋದಾಮಿನಿಂದ 20.67 ಕ್ವಿಂಟಾಲ್, ಆಲಪ್ಪುಳ ಜಿಲ್ಲೆಯಿಂದ 15066 ಕ್ವಿಂಟಾಲ್, ಮಲಪ್ಪುರಂ ಜಿಲ್ಲೆಯಿಂದ 7888 ಕ್ವಿಂಟಾಲ್ ಹಾಗೂ ಕೊಲ್ಲಂ ಜಿಲ್ಲೆಯಿಂದ 7551 ಕ್ವಿಂಟಾಲ್ ಪಡಿತರ ಧಾನ್ಯವನ್ನು ಬೇರೆಡೆಗೆ ಸಾಗಿಸಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.