ಪಿ.ಟಿ ಜೋಸೆಫ್ ಅವರನ್ನು ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಅಧಿಕಾರಿಗಳು ಒಕ್ಕೆಲಬ್ಬಿಸಿ ಕಷಿಯನ್ನು ಸಂಪೂರ್ಣ ಕಡಿದು ಉರುಳಿಸಿದ್ದಾರೆ. 
ದಕ್ಷಿಣ ಕನ್ನಡ

ರೈತನನ್ನು ಒಕ್ಕಲೆಬ್ಬಿಸಿ ಕೃಷಿ ನಾಶ

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಅರಸಿನಮಕ್ಕಿ ನಿವಾಸಿ ಪಿ.ಟಿ ಜೋಸೆಫ್ ಎಂಬುವರನ್ನು ಶುಕ್ರವಾರ ಅರಣ್ಯ ಇಲಾಖೆ ವನ್ಯಜೀವಿ ವಿಭಾಗ ಅಧಿಕಾರಿಗಳು ಒಕ್ಕೆಲಬ್ಬಿಸಿದ್ದಲ್ಲದೆ, ಕೃಷಿ ಸಂಪೂರ್ಣ ನಾಶಪಡಿಸಿ ಅರಣ್ಯ ಗಿಡಗಳನ್ನು ನೆಟ್ಟಿದ್ದಾರೆ.

ಐದು ದಶಕದಿಂದ ಇಲ್ಲಿ ವಾಸಿಸುತ್ತಿದ್ದ ಕುಟುಂಬಕ್ಕೆ ನೀಡಲಾಗಿದ್ದ ಹಕ್ಕುಪತ್ರವನ್ನು ರದ್ದುಪಡಿಸಿ ಅರಣ್ಯ ಇಲಾಖೆ ಇದೀಗ ಯಾವುದೇ ಪರಿಹಾರ ನೀಡದೆ ಏಕಾಏಕಿ ಒಕ್ಕಲೆಬ್ಬಿಸಿ ಅವರ ಮನೆ ಹಾಗೂ ಕೃಷಿ ಭೂಮಿಯಿಂದ ಹೊರಗೆ ಕಳುಹಿಸಿದ್ದು, ಬೇರೆ ಜಮೀನಾಗಲೀ ಮನೆಯಾಗಲಿ ಇಲ್ಲದೆ ಬೀದಿಪಾಲಾಗಿದೆ.

50ವರ್ಷಗಳಿಂದ ಅವರು ವಾಸವಿದ್ದ ಮನೆಯನ್ನು ನಾಶಪಡಿಸಿದ್ದು, ಸುಮಾರು ಎರಡು ಎಕರೆ ಜಾಗದಲ್ಲಿದ್ದ ಫಸಲು ಕೊಡುವ ಅಡಕೆ ಮರ, ತೆಂಗಿನ ಮರ ಹಾಗೂ ಇತರ ಕೃಷಿ ಪೂರ್ಣ ಕಡಿದುರುಳಿಸಿ, ಅರಣ್ಯ ಇಲಾಖೆ ಬೋರ್ಡ್ ಅಳವಡಿಸಲಾಗಿದೆ.

1970ರ ಸುಮಾರಿಗೆ ಪಿಟಿ ಜೋಸೆಫ್ ಅವರ ತಂದೆ ಇಲ್ಲಿ ಬಂದು ನೆಲೆಸಿದ್ದು, 1997ರಲ್ಲಿ ಅವರಿಗೆ ರಾಜ್ಯ ಸರ್ಕಾರ ಅಕ್ರಮ ಸಕ್ರಮ ಕಾನೂನಿನಡಿ 4.90 ಎಕರೆ ಜಮೀನಿಗೆ ಹಕ್ಕು ಪತ್ರವನ್ನೂ ನೀಡಿತ್ತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ೋಷಣೆಯಾದ ಬಳಿಕ ಅವರಿಗೆ ಸಮಸ್ಯೆಗಳು ಆರಂಭವಾಯಿತು. 2004ರಲ್ಲಿ ಅವರ ಹಕ್ಕುಪತ್ರ ರದ್ದುಪಡಿಸಲಾಯಿತು. 2014ರಲ್ಲಿ ಅರಣ್ಯ ಇಲಾಕೆ ಜೋಸೆಫ್ ಅವರಿಗೆ ಮತ್ತೆ ನೋಟಿಸ್ ನೀಡಿ ಒಕ್ಕಲೇಳುವಂತೆ ಸೂಚಿಸಿತ್ತು. ಇದರ ವಿರುದ್ಧ ಅವರು ಅರಣ್ಯ ಇಲಾಖೆಯಲ್ಲಿ ಸಲ್ಲಿಸಿದ್ದ ಮೇಲ್ಮನವಿಗಳು ತಿರಸ್ಕೃತಗೊಂಡಿತ್ತು. ಅವರಿಗೆ ಒಕ್ಕಲೇಳುವಂತೆ ಅ.16ರಂದು ಅಂತಿಮ ನೋಟಿಸ್ ನೀಡಿ ಅ.30ರೊಳಗೆ ಸ್ಥಳ ಬಿಟ್ಟು ತೆರಳುವಂತೆ ಸೂಚಿಸಿತ್ತು. ಇದೀಗ ಅ.31ರಂದು ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳ ಸಹಕಾರದೊಂದಿಗೆ ಆಗಮಿಸಿದ ಅರಣ್ಯ ಇಲಾಖೆ ವನ್ಯಜೀವಿ ವಿಭಾಗದ ಬೆಳ್ತಂಗಡಿ ವಲಯ ಅರಣ್ಯಾಧಿಕಾರಿ ಶರ್ಮಿಳಾ ನೇತೃತ್ವದ ತಂಡ ಕೃಷಿ ಹಾಗೂ ಮನೆಯನ್ನು ಸಂಪೂರ್ಣ ನಾಶಪಡಿಸಿ ಒಕ್ಕಲೆಬ್ಬಿಸುವಿಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ.