ಕುಬೇವೂರು-ಶಿಮಂತೂರು ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಹುಲುಸಾಗಿ ಹುಲ್ಲು ಬೆಳೆದಿದೆ. 
ದಕ್ಷಿಣ ಕನ್ನಡ

ರಸ್ತೆಬದಿ ದಟ್ಟ ಹುಲ್ಲು

ಕುಬೇವೂರು ಮತ್ತು ಶಿಮಂತೂರು ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ದಟ್ಟವಾಗಿ ಹುಲ್ಲು ಬೆಳೆದಿದ್ದು ವಾಹನ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಮೂಲ್ಕಿ: ಕುಬೇವೂರು ಮತ್ತು ಶಿಮಂತೂರು ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ದಟ್ಟವಾಗಿ ಹುಲ್ಲು ಬೆಳೆದಿದ್ದು ವಾಹನ ಸಂಚಾರಕ್ಕೆ ಹಾಗೂ ಜನರ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ.

ಕಿಲ್ಪಾಡಿ ಪಂಚಾಯಿತಿ ಕಚೇರಿಯ ಕೆಳಭಾಗದ ಸಂಪರ್ಕ ರಸ್ತೆಯಲ್ಲಿ ಶಾಲೆಯ ಮಕ್ಕಳು ಓಡಾಡುತ್ತಿದ್ದು ಹುಲುಸಾಗಿ ಬೆಳೆದಿರುವ ಹುಲ್ಲು-ಗಿಡಗಂಟಿ ಅಪಾಯಕಾರಿಯಾಗಿ ಪರಿಣಮಿಸಿದೆ.

ಕೆಲದಿನಗಳ ಹಿಂದೆ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ತಂತಿಗೆ ತಾಗುತ್ತಿರುವ ಮರದ ಕೊಂಬೆಗಳನ್ನು ಕತ್ತರಿಸಿ ಅಲ್ಲಲ್ಲಿ ಬಿಟ್ಟು ಹೋಗಿದ್ದು ಮತ್ತಷ್ಟು ಅಪಾಯಕಾರಿಯಾಗಿ ಪರಿಣಮಿಸಿದೆ.

ಬೆಳಗದ ಹೈಮಾಸ್ಟ್ ದೀಪ: ಕಿಲ್ಪಾಡಿ ಪಂಚಾಯಿತಿಯ ಬಳಿ ಒಂದು ಹೈಮಾಸ್ಟ್ ದೀಪ ಅಳವಡಿಸಲಾಗಿದ್ದರೂ ರಾತ್ರಿ ಬೆಳಗದ ಕಾರಣ ಪ್ರದೇಶದಲ್ಲಿ ಕತ್ತಲು ಹರಡಿ ಜನರಿಗೆ ಸಮಸ್ಯೆಯಾಗುತ್ತಿದೆ.

ಕಿಲ್ಪಾಡಿ ಪಂಚಾಯಿತಿಯಿಂದ ಕುಬೆವೂರು- ಶಿಮಂತೂರು ಸಂಪರ್ಕ ರಸ್ತೆಯ ಚರಂಡಿ ವ್ಯವಸ್ಥೆ ಹದಗೆಟ್ಟಿದ್ದು ಮಳೆ ನೀರು ರಸ್ತೆಯಲ್ಲಿ ಹರಿದು ಕಾಂಕ್ರೀಟ್ ಎದ್ದು ಬರುತ್ತಿದೆ. ಈ ಬಗ್ಗೆ ಅನೇಕ ಬಾರಿ ಪಂಚಾಯತಿಗೆ ಮನವಿ ಸಲ್ಲಿಸಿದರೂ ಇದುವರೆಗೂ ಯಾವುದೇ ಸಮರ್ಪಕ ಕಾಮಗಾರಿ ನಡೆದಿಲ್ಲ. ಕೂಡಲೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿ ಅಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ವಿಷಜಂತು ಕಾಟ

ಶಿಮಂತೂರು ದೇವಸ್ಥಾನ ಸಂಪರ್ಕ ರಸ್ತೆಯ ರಸ್ತೆ ಬದಿಯಲ್ಲಿ ಕೂಡ ದಟ್ಟವಾಗಿ ಹುಲ್ಲು ಬೆಳೆದಿದ್ದು ರಸ್ತೆಯಲ್ಲಿ ಎದುರಿನ ಭಾಗದಿಂದ ಒಂದು ವಾಹನ ಬಂದರೆ ಪಕ್ಕಕ್ಕೆ ಸರಿದು ನಿಲ್ಲಲು ಜಾಗ ಇಲ್ಲದಂತಾಗಿದೆ. ಹುಲ್ಲಿನ ಮರೆಯಿಂದ ಹರಿದು ಬರುವ ವಿಷಜಂತುಗಳಿಂದ ರಸ್ತೆಯಲ್ಲಿ ನಡೆದು ಹೋಗುವ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪಾದಾಚಾರಿಗಳಿಗೆ ಭಯದ ವಾತಾವರಣ ಸೃಷ್ಟಿಯಾಗಿದೆ.

ರಸ್ತೆಯಲ್ಲಿ ಕತ್ತಲಾದರೆ ನಡೆದು ಹೋಗುವಾಗ ಹಾವುಗಳ ಕಾಟ ಹೆಚ್ಚಾಗುತ್ತಿದ್ದು ಸಮಸ್ಯೆಯಾಗಿದೆ. ಪಂಚಾಯಿತಿ ತಕ್ಷಣ ರಸ್ತೆ ಬದಿಯ ಹುಲ್ಲು ತೆಗೆಸುವ ಕಾರ್ಯ ನಡೆಸಬೇಕು.
ನಿರಂಜನ್ ಕಿಲ್ಪಾಡಿ, ಸ್ಥಳೀಯರು