ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ಬಿ.ಸಿ.ರೋಡ್ಅಡ್ಡಹೊಳೆ ಚತುಷ್ಪಥ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ವಳಾಲಿನಲ್ಲಿ ನಿರ್ಮಾಣಗೊಂಡಿರುವ ಟೋಲ್ ಪ್ಲಾಜಾ ಗುರುವಾರದಿಂದ ಕಾರ್ಯಾರಂಭಗೊಂಡ ಬೆನ್ನಲ್ಲೇ, ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡಬೇಕೆಂದು ಆಗ್ರಹಿಸಿ ರೈತ ಸಂಘದ ಮುಖಂಡರ ನೇತೃತ್ವದಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಟೋಲ್ನಲ್ಲಿ ಸ್ಥಳೀಯರು ದಿನಕ್ಕೆ ಹಲವು ಬಾರಿ ಸಂಚರಿಸುವಾಗ ಪ್ರತಿ ಬಾರಿಯೂ 140 ರೂ. ಕಡಿತವಾಗುತ್ತಿದೆ. ವ್ಯಕ್ತಿಯೊಬ್ಬರು ಮೂರು ಬಾರಿ ಸಂಚರಿಸಿದರೆ 420 ರೂ. ಪಾವತಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸ್ಥಳೀಯ ನಿವಾಸಿಗಳಿಗೆ ಇದರಿಂದ ಭಾರಿ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ಮುಂದಾಳು ರೂಪೇಶ್ ರೈ ಅಲಿಮಾರು ಮಾತನಾಡಿ, ಸುತ್ತಮುತ್ತಲಿನ ಗ್ರಾಮಗಳ ನಿವಾಸಿಗಳಿಗೆ ವಾರ್ಷಿಕ 1,500 ರೂ. ಯೋಜನೆ ಕೈಬಿಟ್ಟು ಶುಲ್ಕ ವಿನಾಯಿತಿ ನೀಡಬೇಕು. ಜಿಲ್ಲೆಯ ನಿವಾಸಿಗಳಿಗೆ ರಿಯಾಯಿತಿ ಒದಗಿಸಬೇಕು. ಅಧಿಕಾರಿಗಳು ಸ್ಥಳೀಯರ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸುವವರೆಗೆ ಟೋಲ್ ವಸೂಲಿಗೆ ಅವಕಾಶ ನೀಡುವುದಿಲ್ಲ ಎಂದರು.
ಪ್ರತಿಭಟನಾಕಾರರು ಟೋಲ್ ಪ್ಲಾಜಾದ ಎಲ್ಲ ಗೇಟುಗಳನ್ನು ತೆರೆದು ಶುಲ್ಕರಹಿತವಾಗಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿದರು. ಫಾಸ್ಟ್ಟ್ಯಾಗ್ ಸ್ಕ್ಯಾನರ್ ನಿಷ್ಕ್ರಿಯಗೊಳಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ.
ರಶೀದ್ ಮಠ, ಸರ್ಫ್ರಾಜ್, ಬಿ.ಎಂ.ಭಟ್, ಪ್ರಶಾಂತ್, ಝಬೈರ್, ಪ್ರವೀಣ್ ಮೊದಲಾದವರು ಇದ್ದರು. ಉಪ್ಪಿನಂಗಡಿ ಪೊಲೀಸರು ಬಂದೋಸ್ತ್ ಮಾಡಿದರು. ಟೋಲ್ ಪ್ಲಾಜಾ ಮ್ಯಾನೇಜರ್ ಕರುಣಾಕರ ಶೆಟ್ಟಿ ನಿಯಮಾವಳಿಗಳನ್ನು ತಿಳಿಸಿ ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಿದರು.