ದಕ್ಷಿಣ ಕನ್ನಡ

ಆರ್‌ಟಿಒ ಇ-ಚಲನ್ ಹೆಸರಿನ ಎಪಿಕೆ ಫೈಲ್ ಡೌನ್‌ಲೋಡ್ 1 ಲಕ್ಷ ರೂ. ದೋಚಿದ ಸೈಬರ್ ವಂಚಕರು

ಮಂಗಳೂರು: ಆರ್‌ಟಿಒ ಇ-ಚಲನ್ ಹೆಸರಿನ ಎಪಿಕೆ ಫೈಲ್ ಡೌನ್‌ಲೋಡ್ ಮಾಡಿದ ಯುವಕನ ಬ್ಯಾಂಕ್ ಖಾತೆಯಿಂದ 1 ಲಕ್ಷ ರೂ. ವರ್ಗಾವಣೆಯಾಗಿರುವ ಬಗ್ಗೆ ಸೆನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

25 ವರ್ಷದ ಯುವಕ ನ.15ರಂದು ಮಧ್ಯಾಹ್ನ 1.30ರ ಸುಮಾರಿಗೆ ಕೆಲಸ ಮಾಡುತ್ತಿದ್ದಾಗ, ಆತನ ಸ್ನೇಹಿತ ಹಮಾಯುನ್ ಎಂಬಾತನ ವಾಟ್ಸ್‌ಆ್ಯಪ್ ಸಂಖ್ಯೆಯಿಂದ ಎಪಿಕೆ ಫೈಲ್ ಬಂದಿದೆ. ಸ್ನೇಹಿತನಿಂದಲೇ ಬಂದಿರುವ ಸಂದೇಶವೆಂದು ಭಾವಿಸಿದ ಫೈಲ್ ಮೇಲೆ ಕ್ಲಿಕ್ ಮಾಡಿದ್ದು, ಅದು ಮೊಬೈಲ್‌ನಲ್ಲಿ ಡೌನ್‌ಲೋಡ್ ಆಗಿದೆ.

ನ.18ರಂದು ಸಂಜೆ 4.30ರ ಸುಮಾರಿಗೆ ಅವರ ಖಾತೆಯಿಂದ ತಲಾ 50 ಸಾವಿರ ರೂ.ನಂತೆ ಎರಡು ಪ್ರತ್ಯೇಕ ವಹಿವಾಟುಗಳಲ್ಲಿ ಒಟ್ಟು 1 ಲಕ್ಷ ರೂ.ಕಡಿತಗೊಂಡಿರುವ ಬಗ್ಗೆ ಬ್ಯಾಂಕ್‌ನಿಂದ ಸಂದೇಶ ಬಂದಿದೆ.

ಆರ್‌ಟಿಒ ಇ-ಚಲನ್ ಹೆಸರಿನಲ್ಲಿ ಬಂದಿದ್ದ ಎಪಿಕೆ ಫೈಲ್ ಮೂಲಕ ಮೊಬೈಲ್‌ನಲ್ಲಿನ ಬ್ಯಾಂಕ್ ಖಾತೆ ವಿವರಗಳನ್ನು ಕಳವು ಮಾಡಿ ಹಣ ವರ್ಗಾಯಿಸಿರುವ ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.