ಮಂಗಳೂರು: ಸ್ನೇಹಿತನೊಬ್ಬ ಬ್ಯಾಂಕ್ ಖಾತೆಯನ್ನು ಪಡೆದು ಸೈಬರ್ ವಂಚನೆ ಪ್ರಕರಣಕ್ಕೆ ಬಳಸಿ ಮೋಸ ಮಾಡಿರುವುದು ಮಾತ್ರವಲ್ಲದೆ ಸೈಬರ್ ವಂಚಕರು ಕರೆ ಮಾಡಿ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿ ವ್ಯಕ್ತಿಯೊಬ್ಬರು ಸೈಬರ್ ಠಾಣೆಗೆ ದೂರು ನೀಡಿದ್ದಾರೆ.
ದೂರುದಾರರು 2023ನೇ ಸಾಲಿನಲ್ಲಿ ತನ್ನ ವ್ಯವಹಾರಕ್ಕೆಂದು ಖಾಸಗಿ ಬ್ಯಾಂಕ್ ನಲ್ಲಿ ಕರೆಂಟ್ ಖಾತೆ ತೆರೆದಿದ್ದರು. ಎರಡು ವರ್ಷದ ಹಿಂದೆ ತನಗೆ ಪರಿಚಿತನಾಗಿ ಸ್ನೇಹಿತನಾಗಿದ್ದ ಇಬ್ರಾಹಿಂ ಎಂಬಾತ 2025ರ ಡಿಸೆಂಬರ್ ನಲ್ಲಿ ಕರೆಂಟ್ ಖಾತೆಯನ್ನು ವ್ಯವಹಾರದ ಉದ್ದೇಶಕ್ಕಾಗಿ ತನಗೆ ನೀಡುವಂತೆ ಕೇಳಿಕೊಂಡಿದ್ದ. ಅದರಂತೆ ದೂರುದಾರರು ಬ್ಯಾಂಕ್ ಖಾತೆಯ ಪಾಸ್ ಬುಕ್, ಎ.ಟಿಎಂ ಕಾರ್ಡ್, ಚೆಕ್ ಬುಕ್ ಹಾಗೂ ಖಾತೆಗೆ ಲಿಂಕ್ ಆಗಿದ್ದ ಏರ್ ಟೆಲ್ ಕಂಪನಿಯ ಸಿಮ್ ಕಾರ್ಡನ್ನು ಆತನಿಗೆ ನೀಡಿದ್ದರು. ಕೆಲವು ದಿನಗಳ ಬಳಿಕ ಅನುಮಾನ ಬಂದು ಇಬ್ರಾಹಿಂ ಬಳಿ ವಿಚಾರಿಸಿ, ಪಾಸ್ ಬುಕ್ ಹಾಗೂ ಇತರ ವಸ್ತುಗಳನ್ನು ಪಡೆದುಕೊಂಡಿದ್ದಾರೆ.
ಅನುಮಾನ ಬಂದು ಬ್ಯಾಂಕ್ ಗೆ ಹೋಗಿ ಮ್ಯಾನೇಜರ್ ಬಳಿ ವಿಚಾರಿಸಿದಾಗ ವಿವಿಧ ರಾಜ್ಯಗಳಲ್ಲಿ ಬ್ಯಾಂಕ್ ಖಾತೆಯ ಮೇಲೆ 5 ಸೈಬರ್ ಕ್ರೈಂ ದೂರುಗಳಿಗೆ ಸಂಬಂದಿಸಿದಂತೆ ಖಾತೆ ಫ್ರೀಜ್ ಆಗಿರುವುದಾಗಿ ತಿಳಿಸಿದ್ದಾರೆ. ಈ ಬಗ್ಗೆ ಇಬ್ರಾಹಿಂ ಬಳಿ ವಿಚಾರಿಸಿದಾಗ ಆತ ಪ್ರತಿಕ್ರಿಯೆ ನೀಡಿಲ್ಲ.
ಇದಾದ ಬಳಿಕ ವಿದೇಶಿ ನಂಬರ್ ಮತ್ತು ವಾಟ್ಸ್ ಪ್ ನಂಬರ್ ಗಳಿಂದ ನೀನು ನಮ್ಮವರಿಗೆ ಪದೇ ಪದೇ ಫೋನ್ ಮಾಡಿರುವುದರಿಂದ ನೀನೇ ನಮಗೆ 1 ಲಕ್ಷ ರೂ. ನೀಡಬೇಕು. ಮತ್ತೆ ಫೋನ್ ಮಾಡಿದರೆ 2 ಲಕ್ಷ ರೂ. ನೀಡಬೇಕು. ಇಲ್ಲವಾದಲ್ಲಿ ಕೊಲ್ಲದೆ ಬಿಡುವುದಿಲ್ಲ ಎಂದು ಜೀವ ಬೆದರಿಕೆ ಹಾಕಿದ್ದಾರೆ. ಖಾತೆಯನ್ನು ನೀಡಿರುವ ಬಗ್ಗೆ ಯಾರಿಗಾದರೂ ಮಾಹಿತಿ ನೀಡಿದ್ದಲ್ಲಿ ನಿನ್ನ ಮೇಲೆ ದೂರು ದಾಖಲಿಸಿ ನೀನೆ ನಮಗೆ ಹಣ ನೀಡುವಂತೆ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.