ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ವ್ಯಾಪ್ತಿಗೆ ಮತ್ತೆ ಕಾಡಾನೆ ಲಗ್ಗೆಯಿಟ್ಟು ಕೃಷಿ ಹಾನಿ ಮುಂದುವರಿಸಿದೆ. ಪೆರ್ನಾಜೆ ವ್ಯಾಪ್ತಿಗೆ ಒಂಟಿ ಕಾಡಾನೆಯೊಂದು ಪದೇಪದೆ ಲಗ್ಗೆಯಿಟ್ಟು ಕೃಷಿ ಹಾನಿಮಾಡುತ್ತಿದ್ದರೆ ಈ ಬಾರಿ ಎರಡು ಕಾಡಾನೆಗಳು ಜತೆಯಾಗಿ ದಾಳಿ ನಡೆಸಿವೆ.
ಮಂಗಳವಾರ ತಡರಾತ್ರಿ ವೇಳೆ ಪೆರ್ನಾಜೆ ವ್ಯಾಪ್ತಿಗೆ ಲಗ್ಗೆಯಿಟ್ಟ ಕಾಡಾನೆಗಳೆರಡು ಅಲ್ಲಿನ ಕೃಷಿಕರಾದ ಕುಮಾರ್ ಪೆರ್ನಾಜೆ, ರಾಘವೇಂದ್ರ ಭಟ್ ಮತ್ತು ಗೋಪಾಲಕೃಷ್ಣ ಕಲ್ಲೂರಾಯ ಅವರ ತೋಟಗಳಿಗೆ ನುಗ್ಗಿ ಕೃಷಿ ಹಾನಿ ಮಾಡಿದೆ. 25ಕ್ಕೂ ಅಧಿಕ ಬಾಳೆ, 3 ಫಲ ಬರುವ ಅಡಿಕೆ ಮರ, 5 ಗಿಡಗಳನ್ನು ಧ್ವಂಸಗೊಳಿಸಿದ್ದಲ್ಲದೆ 6 ದೀವಿ ಹಲಸು ಮರಗಳ ಸಿಪ್ಪೆ ಸುಲಿದು ಹಾನಿಗೊಳಿಸಿವೆ.