ಅತಿಯಾದ ಮಳೆಯಿಂದ ಅಡಕೆ ಕೊಳೆ ರೋಗ ನಿಯಂತ್ರಣಕ್ಕೆ ಬಾರದೆ ಅಡಕೆ ಮರಗಳು ಸತ್ತಿರುವುದು. 
ದಕ್ಷಿಣ ಕನ್ನಡ

ಅನ್ಯಾಯ ಪ್ರಶ್ನಿಸಲು ಕೃಷಿಕರ ಸಿದ್ಧತೆ Crop Insurance

ಪ್ರಮುಖ ಮುಖ್ಯಾಂಶಗಳು

  • ಮಳೆ ಪ್ರಮಾಣ ಪಡೆಯಲು ಆರ್ ಟಿ ಐ
  • ತಡವಾದ ಪರಿಹಾರ ಜಮೆ
  • ಗಾಯದ ಮೇಲೆ ಬರೆ
ಪುತ್ತೂರು: ಅಡಕೆ ಹಾಗೂ ಕಾಳುಮೆಣಸಿಗೆ ಮಾಡಲಾದ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಕೃಷಿಕರಿಗೆ ಅನ್ಯಾಯವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ. ಯಾವ ಮಾನದಂಡವನ್ನಿಟ್ಟುಕೊಂಡು ಪರಿಹಾರ ವಿತರಿಸಲಾಗಿದೆ ಎಂಬ ಪ್ರಶ್ನೆಗೆ ವಿವಿಧ ಇಲಾಖೆಗಳಿಂದ ಉತ್ತರ ಪಡೆಯುವ ಜತೆಗೆ ವಿಮಾ ಸಂಸ್ಥೆಯನ್ನು ಪ್ರಶ್ನಿಸುವ ಕುರಿತು ಚಿಂತನೆ ಆರಂಭವಾಗಿದೆ.
ಭಾರಿ ಪ್ರಮಾಣದ ಕೃಷಿ ಹಾನಿಯಿಂದ ಕಂಗೆಟ್ಟಿರುವವರಿಗೆ ಅಲ್ಪಪ್ರಮಾಣದ ಪರಿಹಾರ ಮೊತ್ತ ಪಾವತಿಯಾಗಿದೆ. ಇಲಾಖೆ ಹಾಗೂ ವಿಮಾ ಕಂಪನಿ ಮಳೆ ಲೆಕ್ಕಾಚಾರವನ್ನು ಯಾವ ರೀತಿ ಪಡೆದುಕೊಳ್ಳುತ್ತಿದೆ ಎಂಬ ನಿಟ್ಟಿನಲ್ಲಿ ರೈತರು ಹುಡುಕಲು ಮುಂದಾಗಿದ್ದಾರೆ. ಖಾಸಗಿಯಾಗಿ ಮಳೆ ಪ್ರಮಾಣ ಲೆಕ್ಕಾಚಾರ ಹಾಕುವ ಕೃಷಿಕರ ಮಳೆ ಪ್ರಮಾಣವನ್ನೂ ಇದರ ಜತೆಗೆ ತುಲನೆ ಮಾಡುವ ನಿಟ್ಟಿನಲ್ಲಿ ದಾಖಲೆ ತೆಗೆಯಲು ಬೆಳೆಗಾರರು ಮುಂದಾಗಿದ್ದಾರೆ.
ಪರಿಹಾರದ ಮೊತ್ತದಲ್ಲಿ ಅನ್ಯಾಯ ಎಸಗಲು ಕಾರಣರಾದವರ ವಿರುದ್ಧ ನ್ಯಾಯಾಲಯ ಮೆಟ್ಟಿಲೇರುವ ಮುನ್ಸೂಚನೆ ಅಡಕೆ ಬೆಳೆಗಾರರ ವಲಯದಿಂದ ಲಭಿಸುತ್ತಿದೆ. ಬೆಳೆಯಿಲ್ಲದೆ ಕಂಗಾಲಾಗಿರುವ ಕೃಷಿಕ, ಸಹಕಾರಿ ಸಂಘದಲ್ಲಿರುವ ಬೆಳೆ ಸಾಲ ಮರುಪಾವತಿಯ ಸಮಯ ಪರದಾಟ ನಡೆಸುವ ಸಾಧ್ಯತೆಯಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಗಂಭೀರ ಚಿಂತನೆ ನಡೆಸಬೇಕೆಂಬುದು ಆರ್ಥಿಕ ತಜ್ಞರ ಅಭಿಪ್ರಾಯ. ಜನಪ್ರತಿನಿಧಿಗಳು ಮಧ್ಯ ಪ್ರವೇಶಿಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ.
ಹಿಂದಿನ ಅವಧಿಗಳಲ್ಲಿ ಸೆಪ್ಟೆಂಬರ್ ಅಂತ್ಯದೊಳಗೆ ತಪ್ಪಿದರೆ ಅಕ್ಟೋಬರ್ ಮೊದಲ ವಾರ ಪರಿಹಾರದ ಮೊತ್ತ ಪಾವತಿಯಾಗುತ್ತಿತ್ತು. ಕಳೆದ ವರ್ಷ ನವೆಂಬರ್ ಮೊದಲ ವಾರಕ್ಕೆ ಪಾವತಿಯಾದ ವಿಮಾ ಪರಿಹಾರ ಮೊತ್ತ ಈ ಬಾರಿ ಇನ್ನಷ್ಟು ಸಮಯ ಪಡೆದುಕೊಂಡು ಡಿಸೆಂಬರ್ ಎರಡನೇ ವಾರದಲ್ಲಿ ರೈತರ ಕೈ ಸೇರಿದೆ. ಎರಡು ವರ್ಷಗಳಿಂದ ಸಮಯ ಮೀರಿ ಪರಿಹಾರ ಬರುತ್ತಿರುವ ಹಿಂದಿನ ಉದ್ದೇಶವೇನೆಂಬ ಪ್ರಶ್ನೆ ರೈತರದ್ದಾಗಿದೆ.

ಮಳೆಮಾಪನ ಮಾಹಿತಿಗೆ ಬೇಡಿಕೆ

ಬೆಳೆ ವಿಮೆ ಗ್ರಾಮವಾರು ಮಳೆ ಮಾಪನ ವರದಿ ಆಧಾರದಲ್ಲಿ ಬಿಡುಗಡೆಗೊಳ್ಳುತ್ತಿದ್ದು, ಕೆದಂಬಾಡಿ ಮತ್ತು ಕೆಯ್ಯೂರು ಗ್ರಾಮಕ್ಕೆ ಅತಿ ಕಡಿಮೆ ಮೊತ್ತದ ಬೆಳೆ ವಿಮೆ ಬಿಡುಗಡೆಯಾಗಿದೆ. ಈ ನಿಟ್ಟಿನಲ್ಲಿ ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತು ಪುತ್ತೂರು ತಹಸೀಲ್ದಾರ್‌ಗೆ ಪುತ್ತೂರು ತಾಲೂಕಿನ ೨೦೨೪-೨೫ನೇ ಸಾಲಿನ ಗ್ರಾಮವಾರು ಮಳೆ ಮಾಪನ ವರದಿ ನೀಡುವಂತೆ ಪತ್ರ ಬರೆದಿದ್ದಾರೆ. ಜತೆಗೆ ಕೃಷಿ ಇಲಾಖೆಯ ದಕ್ಷಿಣ ಕನ್ನಡ ಜೆಡಿಗೆ ಮಾಹಿತಿ ಹಕ್ಕಿನ ಮೂಲಕ ಮಾಹಿತಿ ಕೇಳಿದ್ದಾರೆ.

ಮೂರು ವರ್ಷಗಳ ಪರಿಹಾರ

ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಗಣಪತಿ ಭಟ್ ೩ ವರ್ಷ ಅಡಕೆಗೆ ಕಟ್ಟಿದ ವಿಮೆ ಲೆಕ್ಕಾಚಾರವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದರಂತೆ ೨೦೨೨-೨೩ರಲ್ಲಿ ೫ ಸಾವಿರ ರೂ. ಕಟ್ಟಿದ್ದು, ಕೇಂದ್ರ ೩೫ ಸಾವಿರ ರೂ., ರಾಜ್ಯ ೬೦ ಸಾವಿರ ರೂ. ಪಾವತಿಸಿ, ಪರಿಹಾರ ೬೦ ಸಾವಿರ ರೂ. ಲಭಿಸಿತ್ತು. ೨೦೨೩-೨೪ರಲ್ಲಿ ೧೦ ಸಾವಿರ ರೂ. ಪಾವತಿಸಿದ್ದು, ಕೇಂದ್ರ ೭೦ ಸಾವಿರ ರೂ., ರಾಜ್ಯ ೧.೨೦ ಲಕ್ಷ ರೂ. ಪಾವತಿಸಿ, ಪರಿಹಾರ ೮೦ ಸಾವಿರ ರೂ. ಲಭಿಸಿತ್ತು. ೨೦೨೪-೨೫ರಲ್ಲಿ ೨೦ ಸಾವಿರ ರೂ. ಕಟ್ಟಿದ್ದು, ಕೇಂದ್ರ ೧.೪೦ ಲಕ್ಷ ರೂ., ರಾಜ್ಯ ೨.೪೦ ಲಕ್ಷ ರೂ. ಪಾವತಿಸಿದ್ದು, ಪರಿಹಾರ ಮಾತ್ರ ೧೦ ಸಾವಿರ ರೂ. ಲಭಿಸಿದೆ ಎಂದು ತಿಳಿಸಿದ್ದಾರೆ.
"

ವಿಟ್ಲ ಕಸ್ಬಾದಲ್ಲಿ ೨.೭೪ ಎಕರೆ ಜಾಗಕ್ಕೆ ಕರಿಮೆಣಸಿಗೆ ೯೫೧ ರೂ. ಹಾಗೂ ಅಡಕೆಗೆ ೭,೧೨೨ ರೂ. ವಿಮಾ ಮೊತ್ತ ಪಾವತಿಸಿದ್ದು, ಸದ್ಯ ಪರಿಹಾರ ೩,೯೯೫ ರೂ. ಬಂದಿದೆ. ಕೊಳೆರೋಗದಿಂದ ತತ್ತರಿಸಿದ ರೈತನ ಜೀವನದ ಮೇಲೆ ವಿಮಾ ಪರಿಹಾರ ಗಾಯದ ಮೇಲೆ ಬರೆ ಹಾಕಿದಂತೆ ಆಗಿದೆ. ಸಂಬಂಧಪಟ್ಟ ಇಲಾಖೆಗಳು, ಅಧಿಕಾರಿಗಳು ಕೂಡಲೇ ಕಾರ್ಯ ಪ್ರವೃತ್ತರಾಗಿ, ರೈತರಿಗಾದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು.

"

ಮಂಗಳೂರು ಭಾಗದಲ್ಲಿ ಬೃಹತ್ ಪ್ರಮಾಣದಲ್ಲಿ ತೋಟಗಾರಿಕಾ ಬೆಳೆ ಇದ್ದು, ವಿಮೆ ಎಂಬುದು ಕೃಷಿಕರಿಗೆ ಪ್ರೋತ್ಸಾಹಕವಾಗಿ ಸಿಗುವಂತದ್ದಾಗಿದೆ. ಎರಡು ವರ್ಷದ ಮಳೆಯ ಪ್ರಮಾಣದಲ್ಲಿ ಬಹಳ ದೊಡ್ಡ ವ್ಯತ್ಯಾಸಗಳಿಲ್ಲ. ಈಗಿನ ಮಾಹಿತಿಗಳ ಪ್ರಕಾರ ಕಳೆದ ಸಾಲಿನಲ್ಲಿ ಪಾವತಿಯಾದ ಪರಿಹಾರದ ಮೊತ್ತದಷ್ಟೇ ಈ ಬಾರಿ ಪರಿಹಾರ ಬಂದಿದೆ. ಸಂಬಂಧಪಟ್ಟ ಅಧಿಕಾರಿಗಳಿಂದ ಹೆಚ್ಚಿನ ಮಾಹಿತಿ ಪಡೆದುಕೊಳ್ಳಲಾಗುವುದು.

"

ತಾಪಮಾನ ಕಾರಣದಿಂದ ಹಾಗೂ ಕೊಳೆರೋಗದಿಂದ ಈ ಬಾರಿ ಅಡಕೆ ನಷ್ಟವಾಗಿದ್ದು, ಬೆಳೆ ವಿಮೆ ಮೂಲಕ ಪರಿಹಾರ ಸಿಗಬಹುದು ಎಂದು ಅನೇಕ ಕೃಷಿಕರು ನಿರೀಕ್ಷೆಯಲ್ಲಿದ್ದರು. ಆದರೆ ಈ ನಿರೀಕ್ಷೆ ಹುಸಿಯಾಗಿದೆ. ಮೇಲ್ನೋಟಕ್ಕೆ ಹವಾಮಾನ ದಾಖಲೆಗಳಲ್ಲಿನ ವ್ಯತ್ಯಾಸವೇ ಕಾಣುತ್ತದೆ. ಇದಕ್ಕಾಗಿ ಸರ್ಕಾರಿ ದಾಖಲೆ ಹಾಗೂ ಸ್ಥಳೀಯವಾಗಿ ಅಥವಾ ಖಾಸಗಿಯಾಗಿ ದಾಖಲಾಗಿರುವ ಹವಾಮಾನ ದಾಖಲೆಗಳ ತುಲನೆ ಮಾಡಿ ಸೂಕ್ತ ಪರಿಹಾರ ಅಡಕೆ ಬೆಳೆಗಾರರಿಗೆ ಒದಗಿಸಬೇಕಿದೆ.