ಗಾಂಜಾ 
ದಕ್ಷಿಣ ಕನ್ನಡ

ಅಪರಾಧಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ : ಗಾಂಜಾ ಸಾಗಾಟ ಪ್ರಕರಣ

ಕಾಸರಗೋಡು: ಮೂರು ಕಿಲೋ ಗಾಂಜಾ ಸಾಗಿಸಿದ ಪ್ರಕರಣದ ಅಪರಾಧಿ ಪಡನ್ನ ಆಲಕ್ಕಲ್ ಸುಹರಾ ಮಂಜಿಲ್‌ನ ರಾತೀಕ್ ಟಿ.(42) ಎಂಬಾತನಿಗೆ ಕಾಸರಗೋಡು ಜಿಲ್ಲಾ ಸೆಷನ್ಸ್ ನ್ಯಾಯಾಲಯ 3 ವರ್ಷ ಕಠಿಣ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿದೆ. ದಂಡ ಪಾವತಿಸದಿದ್ದಲ್ಲಿ ಆರೋಪಿ 3 ತಿಂಗಳ ಹೆಚ್ಚಿನ ಜೈಲು ಶಿಕ್ಷೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. 2014 ಅಕ್ಟೋಬರ್ 21ರಂದು ನೀಲೇಶ್ವರ ಅಬಕಾರಿ ರೇಂಜ್‌ನ ಅಬಕಾರಿ ಇನ್‌ಸ್ಪೆಕ್ಟರ್ ಸಜಿ ಮತ್ತಾಯಿ ನೇತೃತ್ವದ ಅಬಕಾರಿ ತಂಡ ಪಡನ್ನ ಆಲಕ್ಕಲ್‌ನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಬೈಕ್‌ನಲ್ಲಿ ಸಾಗಿಸುತ್ತಿದ್ದ 3 ಕಿಲೋ ಗಾಂಜಾ ವಶಪಡಿಸಿ ಆರೋಪಿಯನ್ನು ಬಂಧಿಸಲಾಗಿತ್ತು. ಅಂದಿನ ಕಾಸರಗೋಡು ಅಸಿಸ್ಟೆಂಟ್ ಅಬಕಾರಿ ಕಮಿಷನರ್ ಆಗಿದ್ದ ಎ.ಎನ್.ಶಾ ಈ ಬಗ್ಗೆ ತನಿಖೆ ನಡೆಸಿದ್ದರು.

ಬಾಲಕರಿಂದ ಸ್ಕೂಟರ್ ರೈಡ್, ಪಾಲಕರಿಗೆ ಕೇಸ್

ಕಾಸರಗೋಡು: ಬದಿಯಡ್ಕ ಪೊಲೀಸ್ ಠಾಣೆ ವ್ಯಾಪ್ತಿಯ ಪೊಡಿಪಳ್ಳದಿಂದ ಪಾಲಕುನ್ನು ಕಡೆಗೆ ಬಾಲಕ ಚಲಾಯಿಸುತ್ತಿದ್ದ ಸ್ಕೂಟರ್ ವಶಪಡಿಸಿಕೊಂಡು ಬೇಕಲ ಕಣ್ಣಂಕುಳಂ ನಿವಾಸಿ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮವ್ವಲ್‌ನಲ್ಲಿ ನಡೆದ ಇನ್ನೊಂದು ಕಾರ್ಯಾಚರಣೆಯಲ್ಲಿ ಸ್ಕೂಟರ್ ಚಲಾಯಿಸುತ್ತಿದ್ದ ಬಾಲಕನನ್ನು ಸೆರೆಹಿಡಿದು ತಾಯಿ ಪೆರಿಯ ಬಜಾರ್ ನಿವಾಸಿ ಮಹಿಳೆ ವಿರುದ್ಧ ಮೇಲ್ಪರಂಬ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಅಪ್ರಾಪ್ತರಿಗೆ ವಾಹನ ಚಲಾಯಿಸಲು ನೀಡದಂತೆ ಪೊಲೀಸರು ಜಾಗೃತಿ ಮೂಡಿಸುತ್ತಿರುವ ಮಧ್ಯೆ ಇಂತಹ ಪ್ರಕರಣಗಳೂ ಹೆಚ್ಚಾಗುತ್ತಿದೆ. ಅಪ್ರಾಪ್ತರು ವಾಹನ ಚಲಾಯಿಸುತ್ತಿರುವುದು ತಪಾಸಣೆ ವೇಳೆ ಪತ್ತೆಯಾದಲ್ಲಿ ಆರ್‌ಸಿ ಮಾಲಿಕರಿಗೆ 25 ಸಾವಿರ ರೂ. ದಂಡ ವಿಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೆಲಸಕ್ಕೆ ತೆರಳಿದ್ದ ಯುವತಿ ನಾಪತ್ತೆ

ಕಾಸರಗೋಡು: ಬೇಡಡ್ಕ ಪೊಲೀಸ್ ಠಾಣಾ ವ್ಯಾಪ್ತಿಯ ಕೊಳತ್ತೂರು, ಕೊವ್ವಲ್ ವಳಪ್ಪು ಹೌಸ್ ನಿವಾಸಿ, ಕಾಸರಗೋಡಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನಂದನಾ (23) ನಾಪತ್ತೆಯಾಗಿರುವ ಬಗ್ಗೆ ಬೇಡಡ್ಕ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೋಮವಾರ ಎಂದಿನಂತೆ ಬೆಳಗ್ಗೆ ಕೆಲಸಕ್ಕೆ ತೆರಳುವುದಾಗಿ ಮನೆಯಿಂದ ಹೊರಟಿದ್ದು, ತಡರಾತ್ರಿವರೆಗೂ ಮನೆಗೆ ವಾಪಸಾಗದ ಹಿನ್ನೆಲೆ ಅವರ ತಂದೆ ಬೇಡಡ್ಕ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.