ವಿಟ್ಲ: ವಿಜ್ಞಾನ ಮತ್ತು ತಂತ್ರಜ್ಞಾನಗಳು ಕೇವಲ ಪ್ರಯೋಗಾಲಯಕ್ಕೆ ಸೀಮಿತವಾಗದೆ, ನೇರವಾಗಿ ರೈತರ ಭೂಮಿಗೆ ತಲುಪಬೇಕಿದೆ. ಅಡಿಕೆ ಬೆಳೆಗಾರರು ಇಂದು ಎದುರಿಸುತ್ತಿರುವ ನಾನಾ ಸವಾಲುಗಳ ನಡುವೆ ಕೊಕ್ಕೋ ಬೆಳೆ ಉತ್ತಮ ಭವಿಷ್ಯವನ್ನು ಹೊಂದಿದೆ. ಕೃಷಿ ಕಾರ್ಮಿಕರ ಅಭಾವವನ್ನು ಸರಿದೂಗಿಸಲು ಕೃಷಿಯಲ್ಲಿ ಯಾಂತ್ರೀಕರಣ ಅತ್ಯಗತ್ಯ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಹೇಳಿದರು.
ವಿಟ್ಲ ಐಸಿಎಆರ್-ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆಯಲ್ಲಿ, ಐಸಿಎಆರ್-ಸಿಪಿಸಿಆರ್‌ಐ, ಬೆಂಗಳೂರು ಅಕಾಡೆಮಿ ಫಾರ್ ಇಂಡಿಯನ್ ಹಾರ್ಟಿಕಲ್ಚರ್ ಸಹಯೋಗದೊಂದಿಗೆ ಸೋಮವಾರ ನಡೆದ ‘ಆತ್ಮನಿರ್ಭರ ಕೊಕ್ಕೋ ಕ್ಷೇತ್ರ’ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಕಸಿತ ಭಾರತದ ನಿರ್ಮಾಣದಲ್ಲಿ ಪ್ರತಿಯೊಬ್ಬರ ಪಾತ್ರವೂ ದೊಡ್ಡದಿದೆ. ರೈತರು ಬೆಳೆಯುವ ಕೊಕ್ಕೊ ಬೆಳೆಯನ್ನು ಉತ್ತಮ ಬೆಲೆಗೆ ಖರೀದಿಸಲು ಕ್ಯಾಂಪ್ಕೊ ಯಾವಾಗಲೂ ಸಿದ್ಧವಾಗಿದೆ ಎಂದು ಭರವಸೆ ನೀಡಿದರು.
ಐಸಿಎಆರ್ ತೋಟಗಾರಿಕೆ ನಿವೃತ್ತ ಡೆಪ್ಯುಟಿ ಡೈರೆಕ್ಟರ್ ಜನರಲ್ ಡಾ.ಎನ್.ಕೆ.ಕೃಷ್ಣ ಕುಮಾರ್ ಮಾತನಾಡಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಉತ್ಪಾದನೆಯ ಬಗ್ಗೆ ಹೆಮ್ಮೆ ಪಡುವ ಬದಲು ಹೆಚ್ಚಿನ ಮೌಲ್ಯ ಮತ್ತು ಕಡಿಮೆ ಪ್ರಮಾಣದ ಬೆಳೆಗಳಿಗೆ ಬದಲಾವಣೆಯಾಗಬೇಕು. ಕೊಕ್ಕೊ ಉದ್ಯಮದ ಪ್ಯಾಕೇಜಿಂಗ್, ಲೇಬಲಿಂಗ್ ಕಳಪೆಯಾಗಿದೆ. ದೇಶದ ಚಾಕಲೇಟ್‌ಗಳಲ್ಲಿ ಸಕ್ಕರೆ ಹೆಚ್ಚಾಗಿ ಕೊಕ್ಕೊ ಬಟರ್ ಕಡಿಮೆಯಿರುವುದರಿಂದ ಜನ ವಿದೇಶಿ ಉತ್ಪನ್ನದ ಕಡೆ ವಾಲುತ್ತಿದ್ದಾರೆ. ಉತ್ಪನ್ನಗಳಲ್ಲಿ ಸೃಜನಶೀಲತೆ ತರಬೇಕು. ಚಾಕಲೇಟ್‌ಗೆ ದೊಡ್ಡ ಬೇಡಿಕೆ ಬರಲಿದ್ದು, ಮಾರ್ಕೆಟಿಂಗ್ ಮಾಡುವ ರೀತಿಯಲ್ಲಿ ಬದಲಾವಣೆ ತರಬೇಕಿದೆ ಎಂದರು.
ಆಂಧ್ರಪ್ರದೇಶ ವೈ.ಎಸ್.ಆರ್.ಎಚ್.ಯು. ಸಂಶೋಧನೆ ನಿರ್ದೇಶಕಿ ಡಾ.ಎಸ್.ಸೂರ್ಯಕುಮಾರಿ ಕಾರ್ಯಕ್ರಮ ಉದ್ಘಾಟಿಸಿದರು. ಕ್ರೈಲೋ ಕೊಕ್ಕೋ ಗಿಡಗಳು ಹಾಗೂ ವಿಟ್ಲ ಕುಬ್ಜ ತಳಿಯ ಅಂಗಾಂಶ ಕೃಷಿಯ ಅಡಿಕೆ ಗಿಡಗಳ ಪ್ರಾಯೋಗಿಕ ನಾಟಿ ಮಾಡಲಾಯಿತು. ಕಲ್ಪ ಸ್ಮಾರ್ಟ್ ಪೋಲ್, ಡಿಸೀಸ್ ಮ್ಯಾನೇಜ್ಮೆಂಟ್ ಕರಪತ್ರ ಬಿಡುಗಡೆಗೊಳಿಸಲಾಯಿತು.
ವಿವಿಧ ಸಂಶೋಧನೆ ಮತ್ತು ವಿಧಾನಗಳ ಬಗ್ಗೆ ವಿಜ್ಞಾನಿಗಳಾದ ಡಾ.ಎನ್.ಕೆ.ಕೃಷ್ಣ ಕುಮಾರ್, ಡಾ.ಎಸ್.ಅಲೈನ್ ಅಪ್ಸರಾ, ಡಾ.ಮಿನಿಮೋಲ್ ಜಿ.ಎಸ್., ಡಾ.ರವಿ ಭಟ್, ವಿಜಯ ಕುಮಾರ್ ಸಿ. ಮತ್ತಿತರರು ಮಾಹಿತಿ ನೀಡಿದರು.
ಕಾಸರಗೋಡು ಸಿಪಿಸಿಆರ್‌ಐ ಮುಖ್ಯಸ್ಥ ಡಾ.ಕೆ.ಬಾಲಚಂದ್ರ ಹೆಬ್ಬಾರ್ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಸಿಪಿಸಿಆರ್‌ಐ ನಿವೃತ್ತ ಮುಖ್ಯಸ್ಥ ಡಾ.ಪಿ.ಚೌಡಪ್ಪ, ಬೆಂಗಳೂರು ಐಸಿಎಆರ್ ನಿರ್ದೇಶಕ ಡಾ.ಎಂ.ಪ್ರಭಾಕರ್ ಮತ್ತು ವಿಜ್ಞಾನಿಗಳು ಉಪಸ್ಥಿತರಿದ್ದರು.
ವಿಟ್ಲ ಸಿಪಿಸಿಆರ್‌ಐ ಮುಖ್ಯಸ್ಥ ಡಾ.ಎಂ.ಕೆ.ರಾಜೇಶ್ ಸ್ವಾಗತಿಸಿದರು. ಕಾಸರಗೋಡು ಸಿಪಿಸಿಆರ್‌ಐ ವಿಜ್ಞಾನಿ ಡಾ.ರವಿ ಭಟ್ ವಂದಿಸಿದರು.
ಅಡಿಕೆಗೆ ನೇರ ಬೆಂಬಲ ಸಿಗದಿದ್ದರೂ, ತೋಟಗಾರಿಕೆ ಬೆಳೆಗೆ ಕೇಂದ್ರ ಸರ್ಕಾರ ಬೆಂಬಲ ನೀಡುತ್ತಿದೆ. ಭಾರತವನ್ನು ಕೊಕ್ಕೋ ಕ್ಷೇತ್ರದಲ್ಲಿ ಸ್ವಾವಲಂಬಿಯನ್ನಾಗಿ ಮಾಡಲು ವಿಜ್ಞಾನಿಗಳು, ಕೈಗಾರಿಕೋದ್ಯಮಿಗಳು ಮತ್ತು ರೈತರು ಒಟ್ಟಾಗಿ ಮುನ್ನಡೆಯಬೇಕಾಗಿದೆ. ಸ್ಥಿರ ಮಾರುಕಟ್ಟೆ, ಹವಾಮಾನ ಬದಲಾವಣೆ, ಕಾರ್ಮಿಕರ ಸಮಸ್ಯೆ ಸೇರಿ ಹಲವು ಸವಾಲುಗಳನ್ನು ಸ್ವೀಕರಿಸಿ, ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಕೊಕ್ಕೊ ಸ್ಯಾಪ್ ಕಾನ್ಸಂಟ್ರೇಟರ್ ತಂತ್ರಜ್ಞಾನದ ಮೂಲಕ ಉತ್ಪಾದನಾ ವೆಚ್ಚವನ್ನು ಶೇ.೫೦ರಷ್ಟು ಕಡಿಮೆ ಮಾಡಲು ಸಾಧ್ಯವಿದೆ.ಕೆ.ಬಿ.ಹೆಬ್ಬಾರ್, ಐಸಿಎಆರ್-ಸಿಪಿಸಿಆರ್ಐ ನಿರ್ದೇಶಕ