ಕಾಸರಗೋಡು: ವಸತಿಗೃಹದ ಕೊಠಡಿಯಲ್ಲಿದ್ದ ಯುವಕ ಹಾಗೂ ಸ್ನೇಹಿತೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ಮತ್ತು ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿ ಹದಿನೇಳರ ಹರೆಯದ ಬಾಲಕ ಸೇರಿದಂತೆ ಮೂವರನ್ನು ಕಾಸರಗೋಡು ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಧೂರು ಎಸ್.ಪಿ. ನಗರದ ಕ್ವಾರ್ಟರ್ಸ್ನಲ್ಲಿ ವಾಸವಾಗಿರುವ ಹಲವು ಪ್ರಕರಣಗಳ ಆರೋಪಿ ಸಾಬಿತ್(30), ನಾಯಮರ್ಮೂಲೆ ಅಕ್ಕರಪಳ್ಳಿ ನಿವಾಸಿ ಅಮೀರ್ ಅಲಿ(30) ಹಾಗೂ 17 ವರ್ಷದ ಬಾಲಕ ಬಂಧಿತರು. ಪನತ್ತಡಿ ಕೋಳಿಚಾಲ್ ನಿವಾಸಿ 22ರ ಹರೆಯದ ಯುವಕ ಮತ್ತು ಸ್ನೇಹಿತೆ ದರೋಡೆಗೀಡಾದವರು.
ಬುಧವಾರ ಸಂಜೆ ಕಾಸರಗೋಡು ಹೊಸ ಬಸ್ ನಿಲ್ದಾಣ ಸನಿಹದ ವಸತಿಗೃಹವೊಂದರಲ್ಲಿ ಘಟನೆ ನಡೆದಿದೆ. ಯುವಕ ಮತ್ತು ಸ್ನೇಹಿತೆ ಲಾಡ್ಜ್ನಲ್ಲಿ ಕೊಠಡಿ ಪಡೆದುಕೊಂಡಿದ್ದ ವೇಳೆ ಅಲ್ಲಿಗೆ ನುಗ್ಗಿದ ಆರೋಪಿಗಳು ಯುವಕನ ಮುಖಕ್ಕೆ ಹೊಡೆದು ಕೊಲೆ ಬೆದರಿಕೆಯೊಡ್ಡಿದ್ದಾರೆ. ಯುವತಿಯ ಒಂದು ಜೊತೆ ಕಿವಿಯೋಲೆ ಹಾಗೂ ಯುವಕನ ಎಟಿಎಂ ಕಾರ್ಡ್ ಕಸಿದು, ಈ ಮೂಲಕ 10 ಸಾವಿರ ರೂ. ದೋಚಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.