ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಮಂಗಳೂರು ವಿದ್ಯುತ್ ಪ್ರವಹಿಸಿ ಗುತ್ತಿಗೆದಾರ ಮೃತ್ಯು

ಮಂಗಳೂರು: ಕಾಟಿಪಳ್ಳ 6ನೇ ಬ್ಲಾಕ್‌ನಲ್ಲಿ ಜಿಮ್ ಇಕ್ಬಾಲ್ ಎಂಬವರಿಗೆ ಸಂಬಂಧಿಸಿದ ಕಟ್ಟಡದ ಮೇಲೆ ಕಬ್ಬಿಣದ ಶೀಟ್ ಅಳವಡಿಸುವ ವೇಳೆ ವಿದ್ಯುತ್ ಪ್ರವಹಿಸಿ ಶೀಟ್ ಮೇಲ್ಬಾವಣಿ ನಿರ್ಮಾಣ ಗುತ್ತಿಗೆದಾರ ಸ್ಥಳದಲ್ಲೇ ಸೋಮವಾರ ಮೃತಪಟ್ಟಿದ್ದಾರೆ.

ಕೃಷ್ಣಾಪುರ ಚಕ್ರವರ್ತಿ ಕ್ರೀಡಾಂಗಣದ ಸಮೀಪದ ನಿವಾಸಿ ಭಾಸ್ಕರ ಜಿ.ಕರ್ಕೇರ (65) ಮೃತ ದುರ್ದೈವಿ. ಇವರು ಕೈಯ್ಯಲ್ಲಿ ಹಿಡಿದುಕೊಂಡಿದ್ದ ಕಬ್ಬಿಣದ ರಾಡ್ ವಿದ್ಯುತ್ ತಂತಿಗೆ ತಾಗುತ್ತಿದ್ದಂತೆ ಭಾಸ್ಕರ ಅವರ ದೇಹದ ಮೂಲಕ ತೀವ್ರ ಪ್ರಮಾಣದ ವಿದ್ಯುತ್ ಪ್ರವಹಿಸಿದ್ದು, ಅವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಕ್ಷಣಾರ್ಧದಲ್ಲಿ ಸಂಭವಿಸಿದ ಈ ದುರ್ಘಟನೆಯಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಘಟನೆಯ ಮಾಹಿತಿ ತಿಳಿದು ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಾಮಗಾರಿ ಸಂದರ್ಭ ಕೆಲಸಗಾರರಿಗೆ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೆ, ಕೈಗೆ ಗ್ಲೌಸ್ ನೀಡದೆ, ವಿದ್ಯುತ್ ತಂತಿಗೆ ಕವರ್ ಹಾಕದೆ ನಿರ್ಲಕ್ಷೃ ತೋರಿದ ಇಕ್ಬಾಲ್ ಅವರ ವಿರುದ್ಧ ಮೃತ ಭಾಸ್ಕರ ಅವರ ಪುತ್ರ ನೀಡಿದ ದೂರಿನ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.