ಉದ್ದೇಶಿತ ಸೇತುವೆ ನಿರ್ಮಾಣಗೊಳ್ಳಲಿರುವ ಬಾಕಿಲ ಪದವು ಹೊಳೆ 
ದಕ್ಷಿಣ ಕನ್ನಡ

ಬಾಕಿಪದವು ಸೇತುವೆ ನಿರ್ಮಾಣ ಸನ್ನಿಹಿತ

ಕೋವಿಡ್ ವೇಳೆ ಸಂಕಷ್ಟ ಎದುರಿಸಿದ್ದ ಜನತೆಗೆ ಭರವಸೆಯ ಕ್ಷಣ ಆರಂಭ

ಪುರುಷೋತ್ತಮ ಪೆರ್ಲ ಕಾಸರಗೋಡು

ಕೇರಳ-ಕರ್ನಾಟಕ ಮಧ್ಯೆ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಎಣ್ಮಕಜೆ ಪಂಚಾಯಿತಿಯ ಬಾಕಿಲಪದವಿನಲ್ಲಿ ಸೀರೆಹೊಳೆಗೆ ಅಡ್ಡ ಸೇತುವೆ ನಿರ್ಮಾಣದ ಕನಸು ನನಸಾಗುವತ್ತ ಸಾಗುತ್ತಿದೆ. ಸೇತುವೆ ಕಾಮಗಾರಿಗಾಗಿ 9.69 ಕೋಟಿ ರೂ. ಮೊತ್ತದ ಟೆಂಡರ್ ಮಂಜೂರಾತಿ ಘೋಷಣೆಯಾಗಿದ್ದು, ದೀರ್ಘ ಕಾಲದ ಕನಸೊಂದು ನನಸಾಗುವ ಕಾಲ ಸನ್ನಿಹಿತವಾಗಿದೆ.

ಸೇತುವೆ ಕೊರತೆಯಿಂದಾಗಿ ಪೆರ್ಲದಿಂದ ನಲ್ಕ-ಬಿರ್ಮೂಲೆ ಮೂಲಕ ಬಾಕಿಲಪದವು ಹೊಳೆ ದಾಟಿ ಆರೇಳು ಕಿ.ಮೀ. ಪ್ರಯಾಣದಲ್ಲಿ ಚವರ್ಕಾಡು ತಲುಪಬಹುದಾದ ದೂರವನ್ನು ಅಡ್ಕಸ್ಥಳ, ಅಡ್ಯನಡ್ಕ ಮೂಲಕ 15 ಕಿ.ಮೀ.ಗೂ ಹೆಚ್ಚು ಸುತ್ತುಬಳಸಿ ತಲುಪಬೇಕಾದ ಪರಿಸ್ಥಿತಿಯಿದೆ.

ಕರೊನಾ ಕಾಲಘಟ್ಟದಲ್ಲಿ ಸಾಯ, ಚವರ್ಕಾಡು ಜನತೆ ಎದುರಿಸಿದ್ದ ಸಮಸ್ಯೆ ಅಷ್ಟಿಷ್ಟಲ್ಲ. ಇಲ್ಲಿನ ಜನತೆಗೆ ಮಳೆಗಾಲದಲ್ಲಿ ಬಾಕಿಲಪದವು ಹೊಳೆ ದಾಟಿ ತೆರಳಲಾಗದೆ, ಸಾರಡ್ಕ ಗೇಟ್ ಮೂಲಕ ಸಾಗಬೇಕಾದ ಅನಿವಾರ್ಯ ಪರಿಸ್ಥಿತಿ ಎದುರಾಗಿತ್ತು. ಅಂದು ಕೋವಿಡ್ ಹಿನ್ನೆಲೆಯಲ್ಲಿ ಅಂತಾರಾಜ್ಯ ಗಡಿಪ್ರದೇಶ ಸಾರಡ್ಕ ಗೇಟನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಇದರಿಂದ ಚವರ್ಕಾಡು -ಸಾಯ ಪ್ರದೇಶದ ಜನತೆ ಅಕ್ಷರಶಃ ದ್ವೀಪಸದೃಶ ಜೀವನ ನಡೆಸುವಂತಾಗಿತ್ತು. ಇಲ್ಲಿನ ಜನತೆಗೆ ರೇಷನ್, ಅಂಚೆ, ಬ್ಯಾಂಕ್, ಪಂಚಾಯಿತಿ ಸೇರಿದಂತೆ ಪ್ರತಿಯೊಂದು ಸರ್ಕಾರಿ ಸವಲತ್ತಿಗೆ ಪೆರ್ಲ ಪೇಟೆಯನ್ನು ಆಶ್ರಯಿಸಬೇಕಾಗಿದ್ದು, ಕರೋನಾ ಕಾಲಘಟ್ಟದಲ್ಲಿ ಹೆಚ್ಚಿನ ಸಂಕಷ್ಟ ಅನುಭವಿಸಿದ್ದರು. ಬೇಸಿಗೆ ಕಾಲದಲ್ಲಿ ಇಲ್ಲಿನ ನಾಗರಿಕರು ಕಾಲ್ನಡಿಗೆಯಲ್ಲಿ ಸಂಚರಿಸುತ್ತಿದ್ದರೆ, ಮಳೆಗಾಲದಲ್ಲಿ ಸುತ್ತುಬಳಸಿ ಹೋಗಬೇಕು. ಕೆಲವು ವರ್ಷಗಳ ಹಿಂದೆ ಬಾಕಿಲಪದವಿನಲ್ಲಿದ್ದ ದೋಣಿ ಸಂಚಾರದ ವ್ಯವಸ್ಥೆ ಸ್ಥಗಿತಗೊಂಡ ನಂತರ ಬಾಕಿಲಪದವು, ಕಲ್ಯಾಟೆ, ಸಾಯ, ಕುಞಿಪಾದೆ ನಿವಾಸಿಗಳು ತುರ್ತು ಅಗತ್ಯಗಳಿಗಷ್ಟೆ ಪೆರ್ಲ ಪೇಟೆಯನ್ನು ಆಶ್ರಯಿಸುತ್ತಿದ್ದರೆ, ಉಳಿದ ಕೆಲಸಗಳಿಗೆ ಅಡ್ಯನಡ್ಕ ಪೇಟೆಯನ್ನೇ ಅವಲಂಬಿಸುತ್ತಿದ್ದಾರೆ.

ನಿವಾರಣೆಯಾದ ವಿಘ್ನ

ಆರಂಭದಲ್ಲಿ ಸೇತುವೆ ನಿರ್ಮಾಣ ಯೋಜನೆಗೆ ಸ್ಥಳೀಯ ವ್ಯಕ್ತಿಯೊಬ್ಬರಿಂದ ಜಾಗದ ಬಗ್ಗೆ ಉಂಟಾಗಿದ್ದ ವ್ಯಾಜ್ಯದಿಂದ ನ್ಯಾಯಾಲಯದ ತಡೆಯಾಜ್ಞೆಯಿಂದ ಕಾಮಗಾರಿಗೆ ಆರಂಭದಲ್ಲೇ ವಿಘ್ನ ಎದುರಾಗಿತ್ತು. ಗ್ರಾಮ ಪಂಚಾಯಿತಿಯ ಅಂದಿನ ಅಧ್ಯಕ್ಷರಾಗಿದ್ದ ಜೆ.ಎಸ್.ಸೋಮಶೇಖರ ನೇತೃತ್ವದಲ್ಲಿ ನಾಗರಿಕ ಸಮಿತಿ ರಚಿಸಿ ಸಮಾಲೋಚನೆ ನಡೆಸಿ ವ್ಯಾಜ್ಯ ಹೊಂದಿದ್ದ ಜಾಗ ಉಪೇಕ್ಷಿಸಿ, ಬೇರೊಂದು ಸ್ಥಳ ಗುರುತಿಸಿ ಯೋಜನಾ ವರದಿ ರಚಿಸಲಾಗಿತ್ತು. ಇದಕ್ಕೆ ಸರ್ಕಾರದ ಮಂಜೂರಾತಿ ಲಭಿಸಿ, ಶಾಸಕ ಎಕೆಎಂ ಅಶ್ರಫ್ ಅವರ ಮುತುವರ್ಜಿಯಿಂದ 9.69ಕೋಟಿ ರೂ. ಗಳ ಕಾಮಗಾರಿಗೆ ತಾಂತ್ರಿಕ ಅನುಮತಿ ದೊರೆತಿದೆ.

ಸ್ಥಳ ಸಂದರ್ಶನ

ಅಂತಾರಾಜ್ಯ ಸಂಪರ್ಕ ಕಲ್ಪಿಸುವ ಬಾಕಿಲಪದವು ಸೇತುವೆ ನಿರ್ಮಾಣ ಯೋಜನೆಗೆ ಜಿಲ್ಲೆಯ ಪ್ರಮುಖ ಗುತ್ತಿಗೆದಾರ ಸಂಸ್ಥೆಯೊಂದು ಟೆಂಡರ್ ವಹಿಸಿಕೊಂಡಿದ್ದು, ಅಧಿಕಾರಿಗಳೊಂದಿಗೆ ಯೋಜನಾ ಸ್ಥಳ ಸಂದರ್ಶಿಸಿ, ಕಾಮಗಾರಿ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಎಸ್.ಸೋಮಶೇಖರ್ ಉಪಸ್ಥಿತರಿದ್ದು, ಸ್ಥಳದ ಭೌಗೋಳಿಕ ಮಾಹಿತಿ ಸಹಿತ ಯೋಜನೆ ಮುಂದುವರಿಸುವ ಬಗ್ಗೆ ಕೆಲವೊಂದು ಸೂಚನೆ ನೀಡಿದರು.

ಬಾಕಿಲಪದವು ಹೊಳೆಗೆ ಸೇತುವೆ ನಿರ್ಮಾಣದ ಬೇಡಿಕೆ ದಶಕದ ಹಿಂದೆಯೇ ಆರಂಭಗೊಂಡಿದ್ದು, ನಿರಂತರ ಶ್ರಮದ ನಂತರ ಸಾಕಾರದತ್ತ ಸಾಗುತ್ತಿದೆ. ಟೆಂಡರ್ ಪ್ರಕ್ರಿಯೆ ಪೂರ್ತಿಗೊಂಡಿದ್ದು, ಕಾಮಗಾರಿ ಶೀಘ್ರ ಆರಂಭಿಸುವ ಭರವಸೆಯನ್ನು ಗುತ್ತಿಗೆದಾರರು ನೀಡಿದ್ದಾರೆ. ಈ ಹಿಂದೆ ಆರಂಭಗೊಂಡಿದ್ದ ಸೇತುವೆ ಕಾಮಗಾರಿ ಜಾಗದ ತಕರಾರಿನಿಂದ ಸ್ಥಗಿತಗೊಂಡಿದ್ದರೂ, ನಂತರ ಅಗತ್ಯ ಬದಲಾವಣೆಯೊಂದಿಗೆ ಹೊಸ ಪ್ರಕ್ರಿಯೆ ಆರಂಭಿಸಲಾಗಿದೆ.
ಸೋಮಶೇಖರ ಜೆ.ಎಸ್, ಸದಸ್ಯ ಕಾಸರಗೋಡು ಜಿಪಂ