ದಕ್ಷಿಣ ಕನ್ನಡ

ಚುನಾವಣೆ ಘೋಷಣೆ ಮೊದಲೇ ಭಿನ್ನಮತ PUTTR

ಕಾಂಗ್ರೆಸ್ ಅಭಿಪ್ರಾಯ ಸಂಗ್ರಹದಲ್ಲಿ ವಿರೋಧ | ಈಶ್ವರಮಂಗಲ ಸಭೆಯ ವಿಡಿಯೋ ವೈರಲ್

ಪುತ್ತೂರು: ಈಶ್ವರಮಂಗದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಭಿನ್ನಮತ ಸೋಟಗೊಂಡಿದ್ದು, ಆಕಾಂಕ್ಷಿ ಅಭ್ಯರ್ಥಿಯ ಹೆಸರು ಹೇಳುತ್ತಿದ್ದಂತೆ ಅಲ್ಪಸಂಖ್ಯಾತ ಮತದಾರರು ಸಿಡಿದೆದ್ದಿದ್ದಾರೆ. ಅಭ್ಯರ್ಥಿಯ ಮಾತಿಗೆ ಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದಲ್ಲದೆ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಮುಸ್ಲಿಮರಿಗೇ ಟಿಕೆಟ್ ನೀಡಬೇಕೆಂಬ ಕೂಗು ಕೇಳಿ ಬಂದಿದೆ. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಥಳೀಯಾಡಳಿತ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಟಿಕೆಟ್ ಹಂಚಿಕೆ ಸವಾಲಾಗಿದೆ.

ಜಿಲ್ಲಾ ಪಂಚಾಯಿತಿ ಚುನಾವಣೆ ಮುಂದಿನ ಜನವರಿಯಲ್ಲಿ ನಡೆಯುವುದು ನಿಶ್ಚಿತವಾಗಿದ್ದು, ಇದಕ್ಕೆ ರಾಜಕೀಯ ಪಕ್ಷಗಳು ತಾಲೀಮು ಪ್ರಾರಂಭಿಸಿವೆ. ಕಾಂಗ್ರೆಸ್ ಈಗಾಗಲೇ ಮತಗಳ ಲೆಕ್ಕಾಚಾರದಲ್ಲಿ ತೊಡಗಿದ್ದು, ಗೆಲುವು ನಿಶ್ಚಿತ ಕ್ಷೇತ್ರದಲ್ಲಿ ಆಪ್ತರನ್ನು ಕಣಕ್ಕಿಳಿಸಲು ಪ್ರಯತ್ನ ನಡೆಯುತ್ತಿದೆ. ಇದರ ಭಾಗವಾಗಿ ಈಶ್ವರಮಂಗಲ ಅನುಗ್ರಹ ಕಾಂಪ್ಲೆಕ್ಸ್‌ನಲ್ಲಿ ಅಭಿಪ್ರಾಯ ಸಂಗ್ರಹ ಸಭೆ ನಡೆಸಲಾಗಿದೆ.

ಹೊರಗಿನವರ ಸ್ಪರ್ಧೆಗೆ ವಿರೋಧ: ಕ್ಷೇತ್ರದ ಅಭ್ಯರ್ಥಿ ಆಕಾಂಕ್ಷಿ ಅನಿತಾ ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್‌ನ ರವಿಪ್ರಸಾದ್ ಸೇರಿ ಹಲವು ಮುಖಂಡರು ಸಭೆಯಲ್ಲಿ ಭಾಗವಹಿಸಿದ್ದರು. ಹೊರಗಿನ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪಧಿಸುವುದಕ್ಕೆ ವಿರೋಧ ವ್ಯಕ್ತವಾಗಿದೆ. ಸಭೆಯಲ್ಲಿ ಭಿನ್ನಮತ ಸೋಟವಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಭಿವೃದ್ಧಿ ಕೆಲಸದ ಮೂಲಕ ಮತಗಳಿಸುವ ಯೋಚನೆಯಲ್ಲಿರುವ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಈ ಜಾತಿ ಲೆಕ್ಕಾಚಾರ ಸವಾಲಾಗಿ ಪರಿಣಮಿಸಿದೆ.

ಅಲ್ಪಸಂಖ್ಯಾತರ ಕಡೆಗಣನೆ

ಕಳೆದ ಚುನಾವಣೆಯ ಪ್ರಕಾರ ಪುತ್ತೂರು ಕ್ಷೇತ್ರದಲ್ಲಿ ೫೫ ಸಾವಿರಕ್ಕೂ ಅಽಕ ಮತ ಮುಸ್ಲೀಮರದ್ದು ಇದೆ ಎಂಬ ಅಂಕಿ-ಅಂಶ ಸಂಗ್ರಹಿಸಲಾಗಿತ್ತು. ಅಲ್ಪಸಂಖ್ಯಾತರಿಗೆ ವಿವಿಧ ಆಯಕಟ್ಟಿನ ಹುದ್ದೆಗಳನ್ನು ನೀಡದೆ, ಅಂತರ ಕಾಯ್ದುಕೊಳ್ಳಲೂ ಯತ್ನಿಸಲಾಗುತ್ತಿದೆ ಎಂಬ ಆರೋಪಗಳೂ ಕೇಳಿಬಂದಿದೆ. ಈ ನಡುವೆ ಜಿಲ್ಲಾ ಪಂಚಾಯಿತಿ ಚುನಾವಣೆಯ ಪೂರ್ವಸಿದ್ಧತೆಯಲ್ಲೂ ಅಲ್ಪಸಂಖ್ಯಾತರನ್ನು ಕಡೆಗಣಿಸಲಾಗುತ್ತಿದೆ ಎಂದು ಆಕ್ರೋಶ ಭುಗಿಲೆದ್ದಿದೆ.

‘ಕೈ’ ಹಿಡಿದ ಕ್ಷೇತ್ರ

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಪುತ್ತಿಲ ಪರಿವಾರ, ಕಾಂಗ್ರೆಸ್ ನಡುವಿನ ತ್ರಿಕೋನ ಸ್ಪರ್ಧೆಯಲ್ಲಿ ಅಶೋಕ್ ಕುಮಾರ್ ರೈ ಗೆಲುವಿನಲ್ಲಿ ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರ ಪ್ರಮುಖ ಪಾತ್ರ ವಹಿಸಿತ್ತು. ಕೊನೆಯ ಹಂತದ ಮತಎಣಿಕೆಯವರೆಗೂ ಪಕ್ಷೇತರ ಅಭ್ಯರ್ಥಿ ಅರುಣ್ ಪುತ್ತಿಲ ಮುಂದಿದ್ದರೂ, ನೆಟ್ಟಣಿಗೆ ಮೂಡ್ನೂರು ಮತ್ತು ಕೊಳ್ತಿಗೆ ಕ್ಷೇತ್ರ ಅಶೋಕ್ ಕುಮಾರ್ ರೈ ಕೈ ಹಿಡಿದಿತ್ತು.

ನೆಟ್ಟಣಿಗೆ ಮುಡ್ನೂರಿನಲ್ಲಿ ಮುಸ್ಲಿಮರಿಗೆ ಅವಕಾಶ

ಪುತ್ತೂರು ವಿಧಾನ ಸಭಾ ಕ್ಷೇತ್ರದ ಉಪ್ಪಿನಂಗಡಿ, ಆರ್ಯಾಪು, ನರಿಮೊಗರು, ನೆಟ್ಟಣಿಗೆ ಮುಡ್ನೂರು ಜಿಲ್ಲಾ ಪಂಚಾಯಿತಿ ಕ್ಷೇತ್ರವಿದ್ದು, ಇದರಲ್ಲಿ ನೆಟ್ಟಣಿಗೆ ಮುಡ್ನೂರು ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ೨೨೪೩ ಮತಗಳಿಂದ ಕಾಂಗ್ರೆಸ್ ಮುನ್ನಡೆ ಸಾಧಿಸಿತ್ತು. ಇಷ್ಟು ಅಂತರದ ಲೀಡ್ ಬರುವುದಕ್ಕೆ ಮುಸ್ಲಿಮರ ಮತ ಕಾರಣವಾಗಿದ್ದು, ಈ ಕ್ಷೇತ್ರದಲ್ಲಿ ಮುಸ್ಲಿಂ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ಆಗಿನ ಬ್ಲಾಕ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ೨೦೨೪ರಲ್ಲೇ ಪಕ್ಷದ ಪ್ರಮುಖರಿಗೆ ಪತ್ರ ಬರೆದಿದ್ದರು.