ಮಂಗಳೂರು: ನಗರದ ವಿವಿಧ ಮಳಿಗೆಗಳಿಂದ ದುಬಾರಿ ಮೌಲ್ಯದ ಕಂಪ್ಯೂಟರ್ ಹಾಗೂ ಇತರ ಉಪಕರಣಗಳನ್ನು ಖರೀದಿ ಮಾಡಿದ ಬಳಿಕ 44,38,071ರೂ. ವಂಚಿಸಿರುವ ಬಗ್ಗೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಂ.ಜಿ. ರಸ್ತೆಯಲ್ಲಿರುವ ಹಿರಾ ಐಟಿ ಸೊಲ್ಯುಷನ್ ಹೆಸರಿನ ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವಿಸಸ್ ಅಂಗಡಿಗೆ ೆ.26ರಂದು ಅಮಿತ್ ಎಂಬಾತ ಬಂದು ತನ್ನ ಗ್ಲೋಬಲ್ ಐಟಿ ವರ್ಲ್ಡ್ ಹೆಸರಿನ ಅಂಗಡಿಗೆ ಕೀಬೋರ್ಡ್, ಮೌಸ್ ಖರೀದಿ ಮಾಡಿದ್ದು ಅದರ ಮೊತ್ತವನ್ನು ಪಾವತಿಸಿದ್ದ. ಮಾ.5ರಂದು ಮತ್ತೆ ಅಮಿತ್ ಬಂದು ಡೆಲ್ 15 ಇಂಚಿನ ಲ್ಯಾಪ್‌ಟಾಪ್ 2, ಲ್ಯಾಪ್‌ಟಾಪ್ ಬ್ಯಾಗ್‌ಗಳನ್ನು ಪಡೆದು ಭಾರೀ ನಂಬಿಕೆ ಬರುವಂತೆ ಹಣ ಪಾವತಿಸಿದ್ದಾನೆ. ಮಾ.12, ಮಾ.16, ಮಾ.19ರ ಮತ್ತು ಮಾ.20ರಂದು ಮತ್ತೆ ಲ್ಯಾಪ್‌ಟಾಪ್, ಬ್ಯಾಗ್ ಖರೀದಿಸಿ ಮೊತ್ತವನ್ನು ವಾರದೊಳಗೆ ನೀಡುವುದಾಗಿ ತಿಳಿಸಿ ಸೊತ್ತುಗಳನ್ನು ಕೊಂಡು ಹೋಗಿದ್ದಾನೆ. ಮಾ.23ರಂದು ಆರೋಪಿ ನೀಡಿದ ಮೊಬೈಲ್‌ಗೆ ಕರೆ ಮಾಡಿದಾಗ ಕರೆ ಸ್ವೀಕರಿಸಿದ ವ್ಯಕ್ತಿ ತಾನು ಹೊರಗಡೆ ಇರುವುದಾಗಿ ಹೇಳಿದ್ದಾನೆ. ಈ ಸಂದರ್ಭ ಅನುಮಾನದ ಮೇರೆಗೆ ದೂರುದಾರರು ಸಿಬ್ಬಂದಿ ಪ್ರದೀಪ್ ಅವರನ್ನು ಗ್ಲೋಬರ್ ಐಟಿ ವರ್ಲ್ಡ್‌ಗೆ ಕಳುಹಿಸಿದಾಗ ಆ ಅಂಗಡಿ ಬಂದ್ ಆಗಿರುವುದು ಕಂಡು ಬಂದಿದೆ. ಆ ಬಳಿಕ ವಿವಿಧ ರೀತಿ ಪರಿಶೀಲಿಸಿದಾಗ ಮೋಸ ಹೋಗಿರುವುದು ತಿಳಿದು ಬಂದಿದೆ.
ಆರೋಪಿ ದೂರುದಾರರ ಅಂಗಡಿಯಿಂದ 8,42,885ರೂ. ಮೌಲ್ಯದ ಸಲಕರಣೆಗಳನ್ನು ಕೊಂಡು ಹೋಗಿದ್ದಾನೆ. ಇದೇ ರೀತಿ ಇಂಟಿಗ್ರಿಟಿ ಟೆಕ್ನಿಕಲ್ ಸೊಲ್ಯುಷನ್‌ನಿಂದ 2,52,000ರೂ. ಮೊತ್ತದ ಸಲಕರಣೆ, ಜಿ.ಎಸ್. ಡಿಸ್ಟ್ರಿಬ್ಯೂಟರ್‌ನಿಂದ 88,842ರೂ. ಮೊತ್ತದ ಸಲಕರಣೆ, ಐಪೆಕ್ಸ್ ಟೆಕ್ನೋಲಜಿಸ್ನಿಂದ 22,58,282ರೂ. ಮೊತ್ತದ ಸಲಕರಣೆಗಳನ್ನು, ಡಿಜಿಟಲ್ ಅಟೋವಿಝ್ ಸೊಲ್ಯುಷನ್‌ನಿಂದ 7,11,918ರೂ. ಮೊತ್ತದ ಸಲಕರಣೆಗಳು, ಶ್ರೀ ನಿಧಿ ಕಂಪ್ಯೂಟರ್ಸ್‌ನಿಂದ 2,84,144ಲಕ್ಷ ರೂ. ಮೊತ್ತ ಸೇರಿದಂತೆ ಒಟ್ಟು 44,38,071ರೂ. ಮೊತ್ತದ ಸಲಕರಣೆಗಳನ್ನು ಕೊಂಡು ಹೋಗಿ ಹಣ ನೀಡದೆ ಮೋಸ ಮಾಡಿದ ಬಗ್ಗೆ ಕೇಸು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.