ಕಳೆದ 5-6 ದಿನಗಳಿಂದ ನಗರದ ಹಲವು ಎಲ್‌ಪಿಜಿ ಬಂಕ್ ಮುಂದೆ ಅಟೂ ರಿಕ್ಷಾಗಳು ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಸರ್ವೇ ಸಾಮಾನ್ಯವಾಗಿದೆ.
ಮಂಗಳೂರು: ದೇಶದ ವಿವಿಧ ಭಾಗಗಳಲ್ಲಿ ಎಲ್‌ಪಿಜಿ ಸಿಲಿಂಡರ್ ಕೊರತೆ ಬಗ್ಗೆ ಚರ್ಚೆಗಳು ನಡೆಯುತ್ತಿರುವ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯೇರಿಕೆ ಬಿಸಿ ಮುಟ್ಟಿದೆ.
ವಾಣಿಜ್ಯ ಸಿಂಡಲ್ ಬೆಲೆ ನಾಲ್ಕೂವರೆ ಸಾವಿರದವರೆಗೆ ಏರಿಕೆಯಾಗಿದ್ದು, ಹೋಟೆಲ್ ನಡೆಸುವುದೇ ಕಷ್ಟಕರವಾಗಿ ಪರಿಣಮಿಸಿದೆ. ಅನಿವಾರ್ಯವಾಗಿ ಊಟ, ತಿಂಡಿಗಳ ಬೆಲೆ ಏರಿಸಬೇಕಿದೆ. ಇದು ಗ್ರಾಹಕರಿಗೂ ಹೊರೆಯಾಗಿದೆ. ಇಸ್ರೇಲ್ -ಇರಾನ್ ನಡುವೆ ಯುದ್ಧ ಆರಂಭವಾದಾಗಿನಿಂದ ದೇಶಾದ್ಯಂತ ಜನತೆಯ ಬದುಕು ತತ್ತರಗೊಂಡಿದ್ದು, ಕರಾವಳಿಯಲ್ಲೂ ಯುದ್ಧದ ಬಿಸಿ ಬಲವಾಗಿಯೇ ತಟ್ಟಿದೆ. ಪ್ರಮುಖವಾಗಿ ವಾಣಿಜ್ಯ ಬಳಕೆಯ ಅನಿಲ ಸಿಲಿಂಡಗಳ ಕೊರತೆ ಬಹುವಾಗಿ ಕಾಡುತ್ತಿದ್ದು, ಕರಾವಳಿಯ ಬಹತೇಕ ಹೋಟೆಲ್, ಮೊಬೈಲ್ ಕ್ಯಾಂಟಿನಗ್‌ಳ ಬಂದ್ ಆಗಿ ತಿಂಗಳು ಹತ್ತಿರವಾಗುತ್ತಿದೆ.
ಒಂದೆಡೆ ಅಡುಗೆ ಅನಿಲ ಸಿಲಿಂಡರ್‌ಗಳ ಸಮಸ್ಯೆ ಇಲ್ಲ ಎಂದು ಜಿಲ್ಲಾಡಳಿತ ಹೇಳಿಕೊಳ್ಳುತ್ತಾ ಬಂದಿದ್ದರೂ ಕೂಡ ಏಜೆನ್ಸಿಗಳು ಈ ಸಿಲಿಂಡರ್‌ಗಳನ್ನು ವಾಣಿಜ್ಯ ಬಳಕೆದಾರರಿಗೆ ವಿತರಿಸುವ ಆರೋಪ ಕೇಳಿಬಂದಿದೆ. ಲಾಭಗಳಿಸುವ ಉದ್ದೇಶದಿಂದ ಕೆಲವು ಏಜೆನ್ಸಿಗಳು ಅಡುಗೆ ಅನಿಲ ಸಿಂಡರ್‌ಗಳನ್ನು ಮಾರಾಟ ಮಾಡುತ್ತಿರುವುದರಿಂದ ಜನಸಾಮಾನ್ಯರ ಮೇಲೆ ಹೊಡೆತ ಬೀಳುತ್ತಿದೆ. ಒಂದು ಗ್ಯಾಸ್ ಬುಕ್ ಮಾಡಿ ಕನಿಷ್ಟ 25 ದಿನ ಕಳೆದ ಬಳಿಕ ಮತ್ತೊಂದು ಸಿಲಿಂಡರ್‌ಗೆ ಬುಕ್ಕಿಂಗ್‌ಗೆ ಅವಕಾಶವಿದ್ದರೂ ಗ್ಯಾಸ್ ಸಿಗದೆ ಜನತೆ ಸಮಸ್ಯೆ ಎದುರಿಸುವಂತಾಗಿದೆ. ಹೋಟೆಲ್‌ಗಳಿಗೆ ಹೋದರೆ ತಿಂಡಿ ತಿನಿಸುಗಳ ದರದಲ್ಲೂ ಏರಿಕೆ. ಅಡುಗೆ ಅನಿಲ ದರದಲ್ಲೂ ಏರಿಕೆ ಇದು ಜನತೆಯನ್ನು ಕಂಗಾಲು ಮಾಡಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್‌ಪಿಜಿ ಪೂರೈಕೆಯಲ್ಲಿ ಉಂಟಾಗಿರುವ ವ್ಯತ್ಯಯವನ್ನು ಬಂಡವಾಳ ಮಾಡಿಕೊಂಡಿರುವ ಕೆಲವು ಏಜೆನ್ಸಿಗಳು ಜಿಲ್ಲೆಯಲ್ಲಿ ‘ಕೃತಕ ಕೊರತೆ’ ಸೃಷ್ಟಿಸಿರುವುದು ಜನತೆಯ ಆಕ್ರೋಶಕ್ಕೆ ಕಾರಣವಾಗಿದೆ.
ಆಟೊ ಎಲ್‌ಪಿಜಿಗೆ ಪರದಾಟ
ಕತಾರ್ ದ್ರವೀಕೃತ ನೈಸರ್ಗಿಕ ಅನಿಲ ಉತ್ಪಾದನೆ (ಎಲ್‌ಎನ್‌ಜಿ) ಹಾಗೂ ಪೂರೈಕೆ ಸ್ಥಗಿತಗೊಂಡಿದ್ದರಿಂದ ಆಟೊ ಎಲ್‌ಪಿಜಿ ಕೊರತೆ ಎದುರಾಗಿದೆ. ಕಳೆದ 5-6 ದಿನಗಳಿಂದ ನಗರದ ಹಲವು ಎಲ್‌ಪಿಜಿ ಬಂಕ್ ಮುಂದೆ ಅಟೂ ರಿಕ್ಷಾಗಳು ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಹಲವಡೆ ಮನಸೋ ಇಚ್ಛೆ ದರ ಏರಿಸುತ್ತಿರುವ ಬಗ್ಗೆ ಆಟೋ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಆಟೊ ಎಲ್‌ಪಿಜಿ ದರ 80 ರು. ಇದ್ದಾಗ ನಗರದ ಬಲ್ಮಠ ಸಮೀಪದ ಬಂಕ್‌ನಲ್ಲಿ 95 ರು. ವಸೂಲಿ ಮಾಡುತ್ತಿದ್ದರು. ಈ ಕುರಿತು ಚಾಲಕರ ದೂರಿನ ಮೇರೆಗೆ ಅಧಿಕಾರಿಗಳು ಕ್ರಮ ಕೈಗೊಂಡ ಬಳಿಕ 80 ರು.ಗೆ ದರ ಇಳಿಸಿದ್ದರು. ಆದರೆ ಈಗ 93.5ರೂ ವಸೂಲಿ ಮಾಡುತ್ತಿರುವ ಬಗ್ಗೆಯೂ ಆಕ್ರೋಷ ವ್ಯಕ್ತವಾಗುತ್ತಿದೆ.