ಕಾಸರಗೋಡು: ಕುಂಬಳೆ ಕಿದೂರು ದೇವಾಲಯಕ್ಕೆ ಸಮೀಪದ ನಿರ್ಜನ ಪ್ರದೇಶದಲ್ಲಿ ನಡೆಯುತ್ತಿದ್ದ ಕೋಳಿ ಅಂಕಕ್ಕೆ ದಾಳಿ ನಡೆಸಿದ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಇವರಿಂದ ಜೂಜಿಗೆ ಬಳಸಿದ್ದೆನ್ನಲಾದ 1030 ರೂ. ನಗದು ಹಾಗೂ ಮೂರು ಎರಡು ಅಂಕದ ಕೋಳಿಗಳನ್ನು ವಶಪಡಿಸಿಕೊಂಡಿದ್ದಾರೆ. ಬೇಳ ಚೌಕಾರು ನಿವಾಸಿ ಅಕ್ಷಯ್(34), ಕಿದೂರು ಶಾಲಾ ಪರಿಸರದ ಜನಾರ್ದನ(35) ಹಾಗೂ ಮೀಯಪದವು ಅಡ್ಕದಗುರಿ ನಿವಾಸಿ ಗಂಗಾಧರ ಮೂಲ್ಯ(63) ಬಂಧಿತರು. ನಂತರ ಇವರನ್ನು ನೋಟಿಸ್ ನೀಡಿ ಬಿಡುಗಡೆಗೊಳಿಸಲಾಯಿತು. ಕಿದೂರಿನಲ್ಲಿ ಜೂಜಾಟದೊಂದಿಗೆ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯನ್ವಯ ಕುಂಬಳೆ ಠಾಣಾಧಿಕಾರಿ ಕೆ.ಪಿ.ಗಣೇಶನ್ ನೇತೃತ್ವದ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿದೆ. ಕೋಳಿ ಅಂಕ ನಡೆಯುವಲ್ಲಿ 50ಕ್ಕೂ ಹೆಚ್ಚು ಮಂದಿ ಜಮಾಯಿಸಿದ್ದು, ಪೊಲೀಸರನ್ನು ಕಂಡು ಉಳಿದವರು ಓಡಿ ಪರಾರಿಯಾಗಿದ್ದಾರೆ.
ಕಾಸರಗೋಡು: ಬೇಕಲ ಹೊಸ ಭಗವತೀ ಕ್ಷೇತ್ರ ಸಮೀಪದ ನಿವಾಸಿ, ಮೀನು ಕಾರ್ಮಿಕ ಗೋಪಾಲನ್(64) ಎಂಬುವರ ಮೃತದೇಹ ಬೇಕಲ ಸೇತುವೆ ಸಮೀಪ ಮಂಗಳವಾರ ಪತ್ತೆಯಾಗಿದೆ. ಮೀನುಗಾರಿಕೆಗಾಗಿ ಹೊಳೆಯಲ್ಲಿರಿಸಿದ್ದ ಬಲೆಯನ್ನು ತೆಗೆಯಲು ತೆರಳುವ ಮಧ್ಯೆ ರೈಲು ಡಿಕ್ಕಿಯಾಗಿರಬೇಕೆಂದು ಸಂಶಯಿಸಲಾಗಿದೆ. ಬೇಕಲ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.