ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಕ್ರೀಡಾಕೂಟದಲ್ಲಿ ಭಾಗವಹಿಸುವುದು ಮುಖ್ಯ, ಸೋತವರು ಎದೆಗುಂದದೆ ಮುಂದೆ ಗೆಲುವಿಗಾಗಿ ಸಿದ್ಧತೆ ನಡೆಸಬೇಕು. ಗೆದ್ದವರು ರಾಜ್ಯ, ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ನಿಟ್ಟಿನಲ್ಲಿ ಪ್ರಯತ್ನಪಡಬೇಕು ಎಂದು ಜಮೀಯತುಲ್ ಫಲಾಹ್ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ನಾಸೀರ್ ಕೆ.ಕೆ. ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಮಂಗಳೂರು ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಕೊಣಾಜೆ ಪದವು ಸರ್ಕಾರಿ ಪ್ರೌಢಶಾಲೆಯ ಸಂಯುಕ್ತ ಆಶ್ರಯದಲ್ಲಿ ಮಂಗಳೂರು ವಿವಿ ಕ್ರೀಡಾಂಗಣದಲ್ಲಿ ಎರಡು ದಿನಗಳ 14 ಮತ್ತು 17ರ ಬಾಲಕ-ಬಾಲಕಿಯರ ಮಂಗಳೂರು ದಕ್ಷಿಣ ವಲಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಶನಿವಾರ ಮಾತನಾಡಿದರು.
ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಜಯಶ್ರೀ ಮಾತನಾಡಿ, ಶಾಲಾಮಟ್ಟದಲ್ಲಿ ನಡೆಯುವ ಕ್ರೀಡಾಕೂಟದಲ್ಲಿ ಇಲಾಖೆಯಿಂದ ಬಹುಮಾನ ಮತ್ತು ಹಾಜರಾತಿ ಮಾತ್ರ ನೀಡಲಾಗುತ್ತದೆ, ಉಳಿದ ಎಲ್ಲ ವ್ಯವಸ್ಥೆಗಳನ್ನು ಮಾಡುವ ದಾನಿಗಳು ಅನಿವಾರ್ಯ ಎಂದರು.
ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್, ತಾಲೂಕು ಅಧ್ಯಕ್ಷ ಶೇಖರ್ ಕಡ್ತಲ, ಪ್ರಾಥಮಿಕ ವಿಭಾಗ ನೋಡೆಲ್ ಅಧಿಕಾರಿ ಪುರುಷೋತ್ತಮ, ಕೊಣಾಜೆಪದವು ಸರ್ಕಾರಿ ಪ್ರೌಢಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್, ಶಾಲಾ ಮುಖ್ಯಶಿಕ್ಷಕಿ ಗಾಯತ್ರಿ, ದೈಹಿಕ ಶಿಕ್ಷಣ ಶಿಕ್ಷಕ ರಾಜೀವ ಟಿ.ನಾಯಕ್ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ತ್ಯಾಗಂ ಹರೇಕಳ ವಂದಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮೋಹನ್ ಶಿರ್ಲಾಲ್ ನಿರೂಪಿಸಿದರು.
14ರ ವಯೋಮಿತಿ ಬಾಲಕರ ವಿಭಾಗದಲ್ಲಿ ಬೆಂದೂರ್ ಸಂತ ಆಗ್ನೆಸ್ ಶಾಲೆ, ಬಾಲಕರ ವಿಭಾಗದಲ್ಲಿ ಮುಚ್ಚೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, 17ರ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಕುಲಶೇಖರ ಸಂತ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆ, ಬಾಲಕರ ವಿಭಾಗದಲ್ಲಿ ಜಪ್ಪು ಸಂತ ಜೆರೋಸಾ ಪ್ರೌಢಶಾಲೆ ಸಮಗ್ರ ಚಾಂಪಿಯನ್‌ಷಿಪ್ ಪಡೆಯಿತು.
ಚಿತ್ರ: ಉಳ್ಳಾಲ.ಅಕ್ಟೋಬರ್-25, ಸ್ಪೋರ್ಟ್ಸ್
ಜಪ್ಪು ಸಂತ ಜೆರೋಸಾ ಪ್ರೌಢಶಾಲೆ ಸಮಗ್ರ ಚಾಂಪಿಯನ್ ಪ್ರಶಸ್ತಿ ಪಡೆಯಿತು. ಜಮೀಯತುಲ್ ಫಲಾಹ್ ಜಿಲ್ಲಾ ಕೋಶಾಧಿಕಾರಿ ಅಬ್ದುಲ್ ನಾಸೀರ್ ಕೆ.ಕೆ., ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ಜಯಶ್ರೀ, ಮಂಗಳ ಗ್ರಾಮೀಣ ಯುವಕ ಸಂಘದ ಅಧ್ಯಕ್ಷ ಎ.ಕೆ.ಅಬ್ದುಲ್ ರಹ್ಮಾನ್ ಕೋಡಿಜಾಲ್ ಉಪಸ್ಥಿತರಿದ್ದರು