ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣದ ಆರೋಪಿ ನಗರದ ವೆಲೆನ್ಸಿಯಾ ಚರ್ಚ್ ಪಾದ್ರಿಯನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಫಾ.ಸಿಪ್ರಿಯನ್ ಪಿಂಟೋ (63) ಬಂಧಿತ ಧರ್ಮಗುರು. ಪ್ರಕರಣ ದಾಖಲಾದ ಬಳಿಕ ತಲೆಮರೆಸಿಕೊಂಡಿದ್ದ ಅವರನ್ನು ಪೊಲೀಸರು ಸಕಲೇಶಪುರದ ಸಂಬಂಧಿಕರೊಬ್ಬರ ಮನೆಯಿಂದ ಬಂಧಿಸಿ ಮಂಗಳೂರಿಗೆ ಕರೆತಂದಿದ್ದಾರೆ.
ಸಂತ್ರಸ್ತ ಬಾಲಕನೊಬ್ಬ ನೀಡಿದ ದೂರಿನಂತೆ ಪಾಂಡೇಶ್ವರ ಪೊಲೀಸರು ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಫಾದರ್ ಸಿಪ್ರಿಯನ್ ಪಿಂಟೋ ಅವರು, ಚಾಕ್ಲೆಟ್ ನೀಡಿ ಪುಸಲಾಯಿಸಿ, ಚರ್ಚ್ ನ ಕೊಠಡಿಯೊಂದಕ್ಕೆ ಕರೆದುಕೊಂಡು ಹೋಗಿ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಇತರ ಬಾಲಕರಿಗೂ ಅದೇ ರೀತಿ ದೌರ್ಜನ್ಯ ಎಸಗಿರುವ ಬಗ್ಗೆ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣ ದಾಖಲಾಗುತ್ತಿದ್ದಂತೆ ಧರ್ಮಗುರು ಮಂಗಳೂರಿನಿಂದ ನಾಪತ್ತೆಯಾಗಿ ತಲೆಮರೆಸಿಕೊಂಡಿದ್ದರು. ಅವರ ಪತ್ತೆಗಾಗಿ ಬೆಂಗಳೂರು, ಕೇರಳ ಸೇರಿದಂತೆ ವಿವಿಧೆಡೆ ಪೊಲೀಸರು ಹುಡುಕಾಟ ನಡೆಸಿದ್ದರು.
ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲಾದ ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಧರ್ಮಗುರುವನ್ನು ಬಂಧಿಸಲಾಗಿದೆ. ವಿಚಾರಣೆ ಹಾಗೂ ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ಬಂಧಿತ ಫಾದರ್ ಸಿಪ್ರಿಯನ್ ಪಿಂಟೋ