ಬೆಳ್ತಂಗಡಿ: ಫೆ.5ರಿಂದ 12ರವರೆಗೆ ದೆಹಲಿಯಲ್ಲಿ ನಡೆಯಲಿರುವ ಪುರುಷರ ಏಷಿಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್ ಕ್ರೀಡಾಕೂಟಕ್ಕೆ ಭಾರತ ತಂಡದ ಪ್ರಾಥಮಿಕ ತರಬೇತಿ ಶಿಬಿರಕ್ಕೆ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ(ಸ್ವಾಯತ್ತ) ಕಾಲೇಜಿನ ಸ್ನಾತಕೋತ್ತರ ಪದವಿ ಕೇಂದ್ರದ ವಿದ್ಯಾರ್ಥಿಗಳಾದ ಚಿಂತನ್ ಬಿ.ಸಿ. ಮತ್ತು ಪುನೀತ್ ಕುಮಾರ್ ಆಯ್ಕೆಯಾಗಿದ್ದಾರೆ.
ಮಡಿಕೇರಿಯ ಗೋಣಿಕೊಪ್ಪಲು ಮೂಲದ ಚೆನ್ನಪ್ಪ ಮತ್ತು ನಳಿನಾಕ್ಷಿ ದಂಪತಿ ಪುತ್ರ ಪುನೀತ್ ಹಾಗೂ ಮೂಡುಬಿದಿರೆ ಎಡಪದವಿನ ಜನಾರ್ದನ ಗೌಡ ಮತ್ತು ವಿಜಯ ದಂಪತಿ ಪುತ್ರ ಪುನೀತ್ ಕುಮಾರ್ ಈ ಹಿಂದೆ ತುಮಕೂರಿನ ಸಿದ್ಧಾರ್ಥ್ ಇನ್‌ಸ್ಟಿಟ್ಯೂಟ್‌ನಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪುರುಷರ ನೆಟ್‌ಬಾಲ್ ಪಂದ್ಯಾಟದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ರಾಜಸ್ಥಾನದ ಜೈಪುರದಲ್ಲಿ ನಡೆದ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಪುರುಷರ ನೆಟ್‌ಬಾಲ್ ಪಂದ್ಯಾಟದಲ್ಲಿ ಭಾಗವಹಿಸಿದ್ದಾರೆ. ಇವರು ಇತ್ತೀಚೆಗೆ ತೆಲಂಗಾಣ ರಾಜ್ಯದ ಹೈದರಾಬಾದ್‌ನಲ್ಲಿ ನಡೆದ 43ನೇ ಸೀನಿಯರ್ ನ್ಯಾಷನಲ್ ನೆಟ್‌ಬಾಲ್ ಪಂದ್ಯಾವಳಿ, ತಮಿಳುನಾಡಿನಲ್ಲಿ ನಡೆದ ಸೀನಿಯರ್ ಸೌತ್ ನ್ಯಾಷನಲ್ ನೆಟ್‌ಬಾಲ್ ಪಂದ್ಯಾಕೂಟದಲ್ಲೂ ಭಾಗವಹಿಸಿದ್ದಾರೆ.
ಏಷಿಯನ್ ನೆಟ್‌ಬಾಲ್ ಚಾಂಪಿಯನ್‌ಷಿಪ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಭಾರತ ತಂಡದ ಅಂತಿಮ ಆಯ್ಕೆ ಪ್ರಕ್ರಿಯೆ ಫೆಬ್ರವರಿ ಮೊದಲ ವಾರದಲ್ಲಿ ನಡೆಯಲಿದ್ದು, ರಾಷ್ಟ್ರಮಟ್ಟದಲ್ಲಿ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟುಗಳಿಗೆ ಉಜಿರೆ ಎಸ್‌ಡಿಎಂ ಕ್ರೀಡಾ ಸಂಘದ ದೈಹಿಕ ಶಿಕ್ಷಣ ಉಪನ್ಯಾಸಕ ಸುದೀನ್ ಪೂಜಾರಿ ತರಬೇತಿ ನೀಡಿದ್ದಾರೆ.