ಚಿಮೇನಿ ಜೈಲಿನ ಕೃಷಿ ಚಟುವಟಿಕೆ. 
ದಕ್ಷಿಣ ಕನ್ನಡ

ಜೈಲು ಹಕ್ಕಿಗಳಿಂದ ಹೊಸತನದ ಕ್ರಾಂತಿ : ಚೀಮೇನಿ ತೆರೆದ ಜೈಲಿನಲ್ಲಿ ಕೋಟಿ ರೂ. ಆದಾಯ

ಪುರುಷೋತ್ತಮ್ ಭಟ್ ಮುಳ್ಳೇರಿಯ
ಕುಕೃತ್ಯಗಳಲ್ಲಿ ಶಿಕ್ಷೆಗೊಳಗಾಗಿ ಜೈಲು ಪಾಲಾಗಿರುವ ಕೈದಿಗಳು ಮತ್ತು ಅವರ ಬದುಕಿನ ಬಗ್ಗೆ ವಿಭಿನ್ನ ಗ್ರಹಿಕೆ ಎಲ್ಲರಲ್ಲಿರುತ್ತವೆ. ಆದರೆ ಇದಕ್ಕೆಲ್ಲ ಅಪವಾದವೆಂಬಂತೆ ಕಾಸರಗೋಡಿನ ಚೀಮೇನಿಯಲ್ಲಿರುವ ತೆರೆದ ಜೈಲಲ್ಲಿ ಹೊಸ ಪ್ರಪಂಚ ಸೃಷ್ಟಿಯಾಗಿದ್ದು, ಕೈದಿಗಳಿಂದ ಆಹಾರ ತಯಾರಿ, ಕೃಷಿ ಮೊದಲಾದ ಚಟುವಟಿಕೆಗಳಿಂದ ಚೀಮೇನಿ ತೆರೆದ ಜೈಲಿಗೆ ಕೋಟ್ಯಂತರ ರೂ. ಆದಾಯ ಬರುತ್ತಿದೆ.
ಚಪಾತಿ, ಬಿರಿಯಾನಿಗಳನ್ನು ಈ ಜೈಲಿನಲ್ಲಿ ತಯಾರಿಸುತ್ತಿದ್ದು, ಜೈಲಿನ ದ್ವಾರದ ಸಮೀಪ ಕ್ಯಾಂಟೀನ್ ತೆರೆಯಲಾಗಿದೆ. ಕೃಷಿ ಕೂಡ ಇಲ್ಲಿನ ಪ್ರಧಾನ ಆದಾಯ ಮೂಲವಾಗಿದೆ. 2013ರಲ್ಲಿ ತೆರೆದ ಜೈಲಿನಲ್ಲಿ ಆಹಾರ ಘಟಕ ಆರಂಭಿಸಲಾಗಿತ್ತು. ಆರಂಭದಲ್ಲಿ ಚಪಾತಿ ಹಾಗೂ ಬಿರಿಯಾನಿ ವಿತರಿಸಲಾಗುತ್ತಿತ್ತು. 2017ರಲ್ಲಿ ಕೆಫೆ ಆರಂಭಿಸಿದ್ದು, ಬಳಿಕ ಆದಾಯ ಹೆಚ್ಚಿತು. ಇದುವರೆಗೆ ಆಹಾರ ಘಟಕದಿಂದ 22 ಕೋಟಿ ರೂ. ಆದಾಯ ಲಭಿಸಿದೆ. ಈ ಬಾರಿ 3 ಕೋಟಿ ರೂ. ಲಾಭ ಬಂದಿದ್ದು, ಅದರಲ್ಲಿ 2 ಕೋಟಿ ರೂ. ಸರ್ಕಾರಕ್ಕೆ ಪಾವತಿಸಲಾಗಿದೆ.

ಕೆಫೆಯಲ್ಲಿದೆ ಬಗೆಬಗೆಯ ಖಾದ್ಯ!

ಜೈಲಿನ ಕೆಫೆಯಲ್ಲಿ ಗ್ರಾಹಕರ ದಟ್ಟಣೆ ಇದ್ದು, ಉತ್ತಮ ವ್ಯಾಪಾರ ನಡೆಯುತ್ತಿದೆ. ಇಲ್ಲಿ ಚಿಕನ್ ಬಿರಿಯಾನಿ, ಚಪಾತಿ, ಚಹಾ, ವಿವಿಧ ತಿಂಡಿಗಳು ಲಭ್ಯವಿವೆ. ಹತ್ತು ರೂ.ಗೆ ಇಲ್ಲಿ ಎಣ್ಣೆ ತಿಂಡಿ ಹಾಗೂ ಚಹಾ ಲಭಿಸುತ್ತದೆ. 70 ರೂ.ಗೆ ಬಿರಿಯಾನಿ, 3 ರೂ.ಗೆ ಚಪಾತಿ ನೀಡಲಾಗುತ್ತದೆ. ಜೈಲಿನಲ್ಲಿರುವ ಫಾರಂನ ಕೋಳಿಗಳನ್ನು ಮಾಂಸಕ್ಕಾಗಿ ಉಪಯೋಗಿಸಲಾಗುತ್ತಿದೆ. ಅವಶ್ಯಕತೆಗಿಂತ ಹೆಚ್ಚಿರುವ ಕೋಳಿಗಳನ್ನು ಕಣ್ಣೂರು ಸೆಂಟ್ರಲ್ ಜೈಲಿಗೆ ನೀಡಲಾಗುತ್ತದೆ.

ಸಾವಯವ ಕೃಷಿಗೂ ಸೈ

ಜೈಲಿನ 30 ಎಕರೆಗಳಷ್ಟು ಪ್ರದೇಶ ಬಳಸಿ ಕೃಷಿ, ಪಶುಸಂಗೋಪನೆ, ಕೋಳಿ ಸಾಕಣೆ, ಮೀನು ಸಾಕಣೆ ನಡೆಸಲಾಗುತ್ತಿದ್ದು, ಜೈಲು ಪ್ರವಾಸಿ ಕೇಂದ್ರವಾಗುವ ದಿನ ದೂರವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೈಲಿನ ಆವರಣದ ವಿಶಾಲವಾದ ಪ್ರದೇಶದಲ್ಲಿ ಕೈದಿಗಳು ಕೃಷಿ ಮಾಡುತ್ತಿದ್ದು, ಇದುವರೆಗೆ ತರಕಾರಿಯಿಂದಲೇ 1.25 ಕೋಟಿ ರೂ. ಆದಾಯ ಪಡೆಯಲಾಗಿದೆ. ಜೈಲಿನ ಅವಶ್ಯಕತೆ ಬಳಿಕ ಉಳಿದ ತರಕಾರಿಗಳನ್ನು ಕೆಫೆ ಮೂಲಕ ಮಾರಾಟ ಮಾಡಲಾಗುತ್ತದೆ. ಈ ತರಕಾರಿಗಳನ್ನು ರಾಸಾಯನಿಕ ಗೊಬ್ಬರಗಳು, ಕೀಟನಾಶಕಗಳನ್ನು ಉಪಯೋಗಿಸದೆ ಬೆಳೆಸಲಾಗುತ್ತಿದೆ. ತರಕಾರಿಗಳು ಮಾತ್ರವಲ್ಲದೆ ಬಾಳೆ ಹಾಗೂ ಗೆಣಸು ಕೃಷಿ ಮಾಡಲಾಗುತ್ತಿದೆ. ಹಸು, ಕೋಳಿ, ಆಡುಗಳ ಫಾರ್ಮ್ ಇದ್ದು, ಇವುಗಳ ಗೊಬ್ಬರವನ್ನೇ ಕೃಷಿಗೆ ಉಪಯೋಗಿಸಲಾಗುತ್ತದೆ. ಪ್ರಸ್ತುತ ಇಲ್ಲಿ 200 ಮಂದಿ ಕೈದಿಗಳಿದ್ದಾರೆ.

ಐದು ವರ್ಷಗಳ ಕೃಷಿ ಆದಾಯ

2020-217,42,679 ರೂ.
2021-2220,88,539 ರೂ.
2022-2315,96,355 ರೂ.
2023-244,78,971 ರೂ.
2024-25
22,11,688 ರೂ.

ಆಹಾರ ತಯಾರಿ ಆದಾಯ

ವರ್ಷ
ಆಹಾರ ಘಟಕಕೆಫೆ
2020-216,67,16810,67,981
2021-223,78,50011,07,173
2022-23 41,09,71549,28,994
2023-241,35,96,93065,22,677
2024-251,86,20,06572,36,873

ಜೈಲಿಗೆ ಬರುವವರು ಅಪರಾಧಿಗಳಾದರೂ ಅವರಲ್ಲೂ ಮಾನವೀಯತೆ ಬೆಳೆಸುವ, ಸ್ವಾವಲಂಬಿ ಬದುಕು ಕಟ್ಟಿಕೊಡುವ ಜವಾಬ್ದಾರಿ ಜೈಲು ಶಿಕ್ಷೆಯ ಮೂಲ ಗುರಿಯ ಒಂದು ಭಾಗ. ಜೈಲಿನ ಎಕರೆಗಟ್ಟಲೆ ಭೂಭಾಗವನ್ನು ವ್ಯರ್ಥಗೊಳಿಸುವ ಬದಲು ಅದನ್ನು ಈ ರೀತಿಯಲ್ಲಿ ಸದುಪಯೋಪಡಿಸುವುದು ಮತ್ತು ತನ್ಮೂಲಕ ಆದಾಯ, ಸ್ವಾವಲಂಬಿ ಪಾಠಗಳನ್ನು ಕಲಿಸುವುದು ಇದರ ಉದ್ದೇಶವಾಗಿದೆ. ಕೈದಿಗಳೇ ಕಾರ್ಮಿಕರಾಗಿ ದುಡಿಯುತ್ತಾರೆ. ಅದಕ್ಕೆ ತಕ್ಕ ವೇತನವನ್ನೂ ಅವರಿಗೆ ಪಾವತಿಸಲಾಗುತ್ತಿದೆ. ಬಹುಶಃ ಶಿಕ್ಷೆಯ ಬಳಿಕದ ಬದುಕಿಗೆ ಇದೊಂದು ಮಾರ್ಗದರ್ಶಿಯಾಗುವುದರಲ್ಲಿ ಸಂಶಯವಿಲ್ಲ. — ಕೆ.ಬಿ.ಅನ್ಸಾರ್, ಸೂಪರಿಟೆಂಡೆಂಟ್ ಚಿಮೇನಿ ತೆರೆದ ಜೈಲು, ಕಾಸರಗೋಡು

ಚಿಮೇನಿ ಜೈಲಿನ ಕ್ಯಾಂಟೀನ್.