ಪೆರ್ಲ ಶಾಲೆಯಲ್ಲಿ ನಡೆದ ಕೌಶಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಕಾಡಗಂ ಮಾತನಾಡಿದರು. 
ದಕ್ಷಿಣ ಕನ್ನಡ

ಮಕ್ಕಳಿಗೆ ಜೀವನ ಪಾಠ ಅಗತ್ಯ

ಕೌಶಲಾಭಿವೃದ್ಧಿ ಕಾರ್ಯಕ್ರಮ

ಕಾಸರಗೋಡು: ಮಕ್ಕಳನ್ನು ಕೇವಲ ಅಂಕ ಗಳಿಸುವ ಯಂತ್ರಗಳನ್ನಾಗಿ ಮಾಡದೆ, ಅವರಿಗೆ ಜೀವನ ಮೌಲ್ಯ ತಿಳಿಸುವ ಪಾಠ ಬೋಧಿಸಬೇಕಾದುದು ಪಾಲಕರ ಕರ್ತವ್ಯ ಎಂದು ನಿವೃತ್ತ ಶಿಕ್ಷಕ ನಿರ್ಮಲ್ ಕುಮಾರ್ ಕಾಡಗಂ ಹೇಳಿದರು.

ಕೇರಳ ಸರ್ಕಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಾಸರಗೋಡು ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ ಸಂಯುಕ್ತ ಆಶ್ರಯದಲ್ಲಿ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ವಿದ್ಯಾರ್ಥಿಗಳು ಹಾಗೂ ಪಾಲಕರಿಗಾಗಿ ‘ನಮ್ಮ ಮಕ್ಕಳ ಜವಾಬ್ದಾರಿ’ ಅಭಿಯಾನದನ್ವಯ ಆಯೋಜಿಸಲಾಗಿದ್ದ ಕೌಶಲ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಆಲೋಚನಾ ಶಕ್ತಿ ಹೆಚ್ಚಿಸುವ ಹಾಗೂ ಪ್ರಶ್ನೆ ಕೇಳುವ ಮನೋಭಾವ ಬೆಳೆಸುವ ರೀತಿಯಲ್ಲಿ ನಮ್ಮ ಮಕ್ಕಳನ್ನು ಬೆಳೆಸಿದಾಗ ಅವರಲ್ಲಿ ನೈತಿಕ ಸ್ಥೈರ್ಯ ಹೆಚ್ಚಾಗುತ್ತದೆ ಎಂದರು.

ಪ್ರಭಾರ ಮುಖ್ಯಶಿಕ್ಷಕ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಮಕ್ಕಳ ಸಂರಕ್ಷಣಾ ಘಟಕ ಯೋಜನಾ ಸಹಾಯಕಿ ರಮ್ಯಶ್ರೀ ಯೋಜನೆ ಬಗ್ಗೆ ಮಾಹಿತಿ ನೀಡಿದರು. ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಪುರುಷೋತ್ತಮ ಬಿ.ಎಂ., ಮಾತೃ ಸಂಘದ ಅಧ್ಯಕ್ಷೆ ಸಾಜಿದಾ, ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಅಭಿಲಾಷಾ ಸ್ವಾಗತಿಸಿದರು. ಹಿರಿಯ ಶಿಕ್ಷಕ ಜಿ.ಕೃಷ್ಣರಾಜ್ ವಂದಿಸಿದರು.