ಕಲುಷಿತವಾಗಿರುವ ಬಾವಿಗಳು 
ದಕ್ಷಿಣ ಕನ್ನಡ

ಬಾವಿ ನೀರಿನಲ್ಲಿ ರಾಸಾಯನಿಕ ಪತ್ತೆ

ಮಾಲಿನ್ಯ ನಿಯಂತ್ರಣ ಮಂಡಳಿ ದೃಢೀಕರಣ

ವಿಜಯವಾಣಿ ಸುದ್ದಿಜಾಲ ಕುಂಬಳೆ

ಅನಂತಪುರ ಕೈಗಾರಿಕಾ ಪ್ರದೇಶದ ಸುತ್ತಮುತ್ತಲಿನ ಪರಿಸರದಲ್ಲಿ ಅಂತರ್ಜಲ ಕಲುಷಿತಗೊಂಡಿರುವುದು ಕೇರಳ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ(ಕೆ.ಎಸ್.ಪಿ.ಸಿ.ಬಿ) ಅಧಿಕೃತ ತಪಾಸಣಾ ವರದಿಯಲ್ಲಿ ಸಾಬೀತಾಗಿದೆ. ಇಲ್ಲಿನ ಬಾವಿ ಹಾಗೂ ಬೋರ್‌ವೆಲ್ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂದು ಪರಿಸರ ಇಂಜಿನಿಯರ್ ಸ್ಪಷ್ಟಪಡಿಸಿದ್ದಾರೆ.

ಕೈಗಾರಿಕಾ ಪ್ರದೇಶದ ಬಳಿಯ ಬಾವಿಗಳಲ್ಲಿನ ನೀರು ಕಲುಷಿತಗೊಳ್ಳುತ್ತಿರುವ ಕುರಿತು ಸ್ಥಳೀಯ ನಿವಾಸಿ, ಕುಂಬಳೆ ಪೇರಾಲು ಕಣ್ಣೂರಿನ ಪಿ.ಟಿ.ನಾರಾಯಣ ಹೆಬ್ಬಾರ್ ಲಿಖಿತ ದೂರು ಸಲ್ಲಿಸಿದ್ದರು. ಅದರಂತೆ ಸೆಪ್ಟೆಂಬರ್ 6ರಂದು ಅವರ ಬಾವಿ ಹಾಗೂ ಬೋರ್‌ವೆಲ್‌ನಿಂದ ನೀರಿನ ಮಾದರಿಗಳನ್ನು ಪರೀಕ್ಷೆಗಾಗಿ ಸಂಗ್ರಹಿಸಲಾಗಿತ್ತು.

ಕಾಂಞಂಗಾಡ್‌ನಲ್ಲಿರುವ ಕಾಸರಗೋಡು ಜಿಲ್ಲಾ ಪರಿಸರ ಇಂಜಿನಿಯರಿಂಗ್ ಕಚೇರಿಯಿಂದ ದೂರುದಾರರಿಗೆ ಕಳುಹಿಸಿರುವ ಅಧಿಕೃತ ವರದಿಯಲ್ಲಿ ಸಂಗ್ರಹಿಸಿದ ನೀರಿನ ಮಾದರಿಗಳ ಪರೀಕ್ಷಾ ಫಲಿತಾಂಶ ಲಗತ್ತಿಸಲಾಗಿದ್ದು, ಸದರಿ ನೀರಿನ ಮೂಲವು ಕುಡಿಯಲು ಯೋಗ್ಯವಲ್ಲ ಎಂಬ ಗಂಭೀರ ಸತ್ಯಾಂಶವನ್ನು ಬಹಿರಂಗಪಡಿಸಲಾಗಿದೆ.

ಕೈಗಾರಿಕಾ ತ್ಯಾಜ್ಯಗಳಿಂದಲೇ ಸ್ಥಳೀಯ ಜಲಮೂಲಗಳು ಕಲುಷಿತಗೊಂಡಿವೆಯೇ ಎಂಬ ಆತಂಕ ಪರಿಸರ ನಿವಾಸಿಗಳಲ್ಲಿ ತೀವ್ರಗೊಂಡಿದ್ದು, ಕುಡಿಯುವ ನೀರಿಗಾಗಿ ಜನತೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸಂಬಂಧಪಟ್ಟ ಇಲಾಖೆ ತಕ್ಷಣವೇ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು, ಶುದ್ಧ ಕುಡಿಯುವ ನೀರು ಪೂರೈಕೆಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಮಾಲಿನ್ಯಕ್ಕೆ ಕಾರಣವಾದ ಅಂಶಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಜಲಚರಗಳಿಗೂ ಸಂಚಕಾರ

ಅನಂತಪುರ, ಕಣ್ಣೂರು ಹಾಗೂ ಸುತ್ತಮುತ್ತಲಿನ ಪರಿಸರದ ಮನೆಗಳ ಬಾವಿಗಳಲ್ಲಿ ನೀರು ಕಪ್ಪು ಬಣ್ಣಕ್ಕೆ ತಿರುಗಿ, ಮೇಲೆ ಎಣ್ಣೆಯಂತಹ ಪದರ ತೇಲುತ್ತಿರುವುದು ಕಂಡುಬಂದಿದೆ. ಕೆರೆ-ಕೊಳಗಳಲ್ಲಿ ಮೀನುಗಳು ಸಾವಿಗೀಡಾಗುತ್ತಿದ್ದು, ಜಲಚರಗಳಿಗೂ ಸಂಚಕಾರ ಬಂದಿದೆ. ಮನೆಯ ಅಂಗಳದಲ್ಲಿರುವ ಬಾವಿ ನೀರನ್ನು ಕನಿಷ್ಠ ಬಟ್ಟೆ ತೊಳೆಯಲು ಅಥವಾ ಜಾನುವಾರುಗಳಿಗೆ ನೀಡಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಸ್ಥರು ಕುಡಿಯುವ ನೀರಿಗಾಗಿ ದೂರದ ಊರುಗಳನ್ನು ಆಶ್ರಯಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ರಾತ್ರಿಯಾದರೆ ಉಸಿರುಗಟ್ಟಿಸುವ ದುರ್ವಾಸನೆ

ಕೇವಲ ಜಲಮಾಲಿನ್ಯವಷ್ಟೇ ಅಲ್ಲದೆ, ವಾಯುಮಾಲಿನ್ಯವೂ ತೀವ್ರಗೊಂಡಿದೆ. ರಾತ್ರಿಯ ಸಮಯದಲ್ಲಿ ಕಾರ್ಖಾನೆಗಳಿಂದ ಹೊರಸೂಸುವ ತೀವ್ರ ವಿಷಕಾರಿ ರಾಸಾಯನಿಕ ಹೊಗೆ ಹಾಗೂ ದುರ್ವಾಸನೆಯಿಂದಾಗಿ ಸಾರ್ವಜನಿಕರು ಉಸಿರಾಟದ ತೊಂದರೆ, ಕಣ್ಣು ಉರಿ ಮತ್ತು ತಲೆನೋವಿನಂತಹ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ.

ವಿಜಯವಾಣಿ ಕಳಕಳಿ

ಅನಂತಪುರ ಪರಿಸರದ ಜನತೆ ಅನುಭವಿಸುತ್ತಿರುವ ಸಂಕಷ್ಟದ ಬಗ್ಗೆ ‘ವಿಜಯವಾಣಿ’ ನಿರಂತರವಾಗಿ ವರದಿ ಪ್ರಕಟಿಸಿದೆ. ಜತೆಗೆ ಈ ಬಗ್ಗೆ ಮೊದಲ ಬಾರಿಗೆ ಬೆಳಕು ಚೆಲ್ಲಿದ್ದು ಕೂಡಾ ವಿಜಯವಾಣಿ. ಪರಿಸರದ ನಿವಾಸಿಗಳು ಪತ್ರಿಕೆಯ ಕಳಕಳಿಗೆ ಮೆಚ್ಚುಗೆ ಸೂಚಿಸಿದ್ದಾರೆ.