ಸಾಂದರ್ಭಿಕ ಚಿತ್ರ 
ದಕ್ಷಿಣ ಕನ್ನಡ

ಗಾಂಜಾ ಸಾಗಾಟ-ಮಾರಾಟ ಪ್ರಕರಣ ಆರೋಪ ಸಾಬೀತು

ಹರೀಶ ಎಂ.
ಮಂಗಳೂರು: ಮಾದಕ ವಸ್ತು ಗಾಂಜಾ ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಟಿ.ಪಿ. ಫಾರೂಕ್ ಎಂಬಾತನ ವಿರುದ್ಧ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅಪರಾಧ ಸಾಬೀತಾಗಿದ್ದು, ಶಿಕ್ಷೆಯ ಮೇಲೆ ವಾದ ಆಲಿಸಲು ಪ್ರಕರಣವನ್ನು ಮಾ.16ಕ್ಕೆ ನಿಗದಿ ಪಡಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಬಂದರು ನಿವಾಸಿ ಟಿ.ಪಿ. ಫಾರೂಕ್ (56) ಹಾಗೂ ನೇಪಾಳದ ರಾಜಪುರ ವಿಡಿಸಿ, ದಾಂಗ್ ಝೋನ್ ನಿವಾಸಿ ಸಾಗರ್ ಸಿಂಗ್ (28) ಎಂಬವರು 2020ರ ನ.10ರಂದು ಕಾರಿನಲ್ಲಿ ಮಂಗಳೂರಿನಿಂದ ಮೆಲ್ಕಾರ್ ಗೆ ತೆರಳಿ ಗಾಂಜಾ ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿಯಂತೆ ಸಂಜೆ 6.20ರ ವೇಳೆಗೆ ಬಂಟ್ವಾಳ ನಗರ ಠಾಣೆ ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದರು. ವಿಚಾರಣೆ ವೇಳೆ ಟಿ.ಪಿ. ಫಾರೂಕ್ ಕಾರಿನ ಡಿಕ್ಕಿಯಿಂದ 1 ಕೆ.ಜಿ. 375 ಗ್ರಾಂ. ತೂಕದ ಗಾಂಜಾ ವಶಪಡಿಸಿಕೊಳ್ಳಲಾಗಿತ್ತು. ಆರೋಪಿಗಳನ್ನು ಅಂಗಶೋಧನೆಗೆ ಒಳಪಡಿಸಿದಾಗ ಟಿ.ಪಿ. ಫಾರೂಕ್ ನ ಪ್ಯಾಂಟ್ ಕಿಸೆಯಲ್ಲಿ 4 ಪ್ಲಾಸ್ಟಿಕ್ ಪ್ಯಾಕೆಟ್ ನಲ್ಲಿ 15 ಗ್ರಾಂ. ನಂತೆ 60 ಗ್ರಾಂ ಹಾಗೂ ಸಾಗರ್ ಸಿಂಗ್ ನ ಪ್ಯಾಂಟ್ ಕಿಸೆಯಲ್ಲಿ3 ಪ್ಯಾಕೆಟ್ ಗಳಲ್ಲಿ 15 ಗ್ರಾಂ.ನಂತೆ 45 ಗ್ರಾಂ. ತೂಕದ ಮಾದಕ ವಸ್ತು ಗಾಂಜಾ ಪತ್ತೆಯಾಗಿತ್ತು. ಜತೆಗೆ ಕಾರು, ಮೊಬೈಲ್, ನಗದು ವಶಪಡಿಸಿಕೊಂಡು ಬಂಟ್ವಾಳ ನಗರ ಠಾಣೆಯಲ್ಲಿ ಎನ್ ಡಿಪಿ ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿತ್ತು. ಆಗಿನ ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್ ಅವರು ತನಿಖೆ ಪೂರ್ಣಗೊಳಿಸಿ ನ್ಯಾ ಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಸಾಗರ್ ಸಿಂಗ್ ಜಾಮೀನು ಪಡೆದು ತಲೆಮರೆಸಿಕೊಂಡಿದ್ದಾನೆ. ಈತ ವಿರುದ್ಧದ ಪ್ರಕರಣವನ್ನು ಸ್ಪ್ಲಿಟ್ ಆಪ್ ಕೇಸ್ ಆಗಿ ವಿಭಜಿಸಲಾಗಿದೆ.
ಪ್ರಕರಣದಲ್ಲಿ ಒಟ್ಟು 10 ಸಾಕ್ಷಿದಾರರನ್ನು ಸರ್ಕಾರಿ ಅಭಿಯೋಜಕಿ ಜುಡಿತ್ ಓಲ್ಗ ಮಾರ್ಗರೆಟ್ ಕ್ರಾಸ್ತಾ ಅವರು ವಿಚಾರಣೆಗೆ ಒಳಪಡಿಸಿದ್ದರು. ನ್ಯಾಯಾಲಯದಲ್ಲಿ ಒಟ್ಟು 29 ದಾಖಲೆಗಳನ್ನು ಗುರುತಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಸವರಾಜ್ ಅವರು ಟಿ.ಪಿ. ಫಾರೂಕ್ ನನ್ನು ಎನ್ ಡಿಪಿ ಎಸ್ ಕಾಯ್ದೆಯ ಕಲಂ 8(ಸಿ), 20(ಬಿ)(2)(ಬಿ) ಅಡಿ ದೋಷಿ ಎಂದು ಮಾ.9ರಂದು ತೀರ್ಪು ನೀಡಿದ್ದಾರೆ. ಮಾ.16ರಂದು ಶಿಕ್ಷೆಯ ಮೇಲೆ ವಾದ ಆಲಿಕೆ ನಡೆಯಲಿದೆ.
ಜಾಮೀನಿನಲ್ಲಿದ್ದ ಫಾರೂಕ್ ನನ್ನು ನ್ಯಾಯಾಂಗ ವಶಕ್ಕೆ ಪಡೆಯಲಾಗಿದ್ದು, ಗರಿಷ್ಠ 10 ವರ್ಷಗಳ ವರೆಗೆ ಶಿಕ್ಷೆಯಾಗುವ ಸಾಧ್ಯತೆಯಿದೆ ಎಂದು ಸರ್ಕಾರಿ ಅಭಿಯೋಜಕಿ ತಿಳಿಸಿದ್ದಾರೆ.
ಟಿ.ಪಿ. ಫಾರೂಕ್ ವಿರುದ್ಧ ಇನ್ನೊಂದು ಗಾಂಜಾ ಪ್ರಕರಣ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. 2023 ಫೆ.5ರಂದು ಈ ಪ್ರಕರಣ ದಾಖಲಾಗಿದ್ದು, ಪ್ರಸ್ತುತ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.