ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸಾವಿರಾರು ಭಕ್ತರ  
ದಕ್ಷಿಣ ಕನ್ನಡ

ಕರಾವಳಿಯಾದ್ಯಂತ ಸಂಭ್ರಮದ ಚಂಪಾ ಷಷ್ಠಿ ಮಹೋತ್ಸವ

ಮಂಗಳೂರು: ದಕ್ಷಿಣ ಭಾರತದ ಪ್ರಸಿದ್ಧ ಕುಕ್ಕೇ ಶ್ರೀ ಸುಬ್ರಹ್ಮಣ್ಯ, ಕುಡುಪು ಶ್ರೀ ಅನಂತಪದ್ಮನಾಭ ಕ್ಷೇತ್ರ ಸೇರಿದಂತೆ ಕರಾವಳಿಯ ಸುಬ್ರಹ್ಮಣ್ಯ ದೇವಸ್ಥಾನಗಳಲ್ಲಿ ಬುಧವಾರ ಚಂಪಾ ಷಷ್ಠಿ ಮಹೋತ್ಸವ ಭಕ್ತಿ, ಸಂಭ್ರಮದಿಂದ ನಡೆಯಿತು.
ದೇವಾಲಯಗಳಲ್ಲಿ ಬೆಳಗ್ಗೆಯಿಂದಲೇ ಭಕ್ತರ ದಟ್ಟಣೆ ಹೆಚ್ಚಿತ್ತು. ದೇವರಿಗೆ ವಿವಿಧ ಸೇವೆಗಳನ್ನು ಸಮರ್ಪಿಸಿ ಕೃತಾರ್ಥರಾದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬೆಳಗ್ಗೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಚಂಪಾ ಷಷ್ಠಿ ಬ್ರಹ್ಮ ರಥೋತ್ಸವ ನಡೆಯಿತು.
ಮಂಗಳೂರಿನ ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನದಲ್ಲಿ ಮಧ್ಯಾಹ್ನ ಬ್ರಹ್ಮ ರಥೋತ್ಸವ ಸಂಭ್ರಮದಿಂದ ನೆರವೇರಿತು. ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹಗಲು ರಥೋತ್ಸವ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ದೇವರ ಬಲಿ ಉತ್ಸವ, ಬೆಳ್ಳಿ ರಥೋತ್ಸವ, ಷಷ್ಠಿ ರಥೋತ್ಸವ, ನೀರುಮಾರ್ಗ ಮಾಣೂರು ಶ್ರೀ ಅನಂತ ಪದ್ಮನಾಭ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸ್ಕಂದ ಪಂಚಮಿ ಮತ್ತು ರಥೋತ್ಸವ, ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ದೇವರ ಬಲಿ ಉತ್ಸವ, ಕಲಶಾಭಿಷೇಕ, ತುಲಾಭಾರ ಸೇವೆ, ಬ್ರಹ್ಮಚಾರಿ ಆರಾಧನೆ, ಮಹಾಪೂಜೆ ಹಾಗೂ ಪಲ್ಲಪೂಜೆ, ಅನ್ನ ಸಂತರ್ಪಣೆ, ರಾತ್ರಿ ರಂಗಪೂಜೆ, ಉತ್ಸವ ಬಲಿ ನಡೆಯಿತು.
ಮಂಗಳೂರು ತಾಲೂಕಿನ ತೋಕೂರು, ಪಾವಂಜೆ, ಕಿಲ್ಪಾಡಿ, ಕಡಂದಲೆ, ಮಾಣೂರು, ಕಂದಾವರ, ಬಂಟ್ವಾಳ ತಾಲೂಕಿನ ಶಂಭೂರು, ಸಜಿಪ ಮುನ್ನೂರು, ಪುತ್ತೂರು ತಾಲೂಕಿನ ದೊಂತಿಲ, ಪಾದಾಳ, ನಳಿಲು, ಬೆಳ್ತಂಗಡಿ ತಾಲೂಕಿನ ಬಳ್ಳಮಂಜ, ಸಾಲಿಪುರ, ಸುಳ್ಯ ತಾಲೂಕಿನ ಅಡ್ಕಾರು, ಕೋಟೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಹಿತ ಜಿಲ್ಲೆಯ ವಿವಿಧ ಸುಬ್ರಹ್ಮಣ್ಯ ಕ್ಷೇತ್ರಗಳಲ್ಲಿ ಷಷ್ಠಿ ಮಹೋತ್ಸವ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಸುಳ್ಯ ಮತ್ತು ಕಾಸರಗೋಡು ತಾಲೂಕಿನ ಗಡಿ ಪ್ರದೇಶ ಬಂದಡ್ಕದ ಇತಿಹಾಸ ಪ್ರಸಿದ್ಧ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಷಷ್ಠಿ ಉತ್ಸವ ನಡೆಯಿತು. ಇಲ್ಲಿ ಗುಹಾ ಪ್ರವೇಶ ವಿಶೇಷವಾಗಿದೆ. ಸುಮಾರು 75ಕ್ಕೂ ಅಧಿಕ ಮಂದಿ ಭಕ್ತರು ವೃತಧಾರಿಗಳಾಗಿ ಗುಹಾ ಪ್ರವೇಶ ಮಾಡಿ ಮೃತ್ತಿಕಾ ಪ್ರಸಾದ ತಂದು ಭಕ್ತರಿಗೆ ಹಂಚಿದರು.