ಬಹುತೇಕ ಸಿಇಟಿ ಅಭ್ಯಾರ್ಥಿಗಳ ಶೈಕ್ಷಣಿಕ ದಾಖಲೆ ಹಾಗೂ ಆಧಾರ್ ತಾಳೆಯಾಗದ ಕಾರಣ ಅರ್ಜಿ ಸಲ್ಲಿಕೆಯಲ್ಲೇ ಗೊಂದಲ ಏರ್ಪಟ್ಟಿದೆ.
ಮಂಗಳೂರು: ಸಿಇಟಿ ಪರೀಕ್ಷೆ ಬರೆಯುವ ಅಭ್ಯರ್ಥಿಗೆ ಅರ್ಜಿ ಪ್ರತಿ, ಪ್ರವೇಶ ಪತ್ರ, ವೆರಿಫಿಕೇಶನ್ ಸ್ಲಿಪ್‌ಗಾಗಿ ಅಲೆದಾಟ ತಪ್ಪಿಸಲು ಈಬಾರಿ ಸಿಇಟಿ ಅಭ್ಯರ್ಥಿಯ ಹೆಸರಿನಲ್ಲಿಯೇ ಹೊಸ ಪೋರ್ಟಲ್ ತೆರೆಯಲಾಗಿದ್ದು, ಬಹುತೇಕ ಅಭ್ಯಾರ್ಥಿಗಳ ಶೈಕ್ಷಣಿಕ ದಾಖಲೆ ಹಾಗೂ ಆಧಾರ್ ತಾಳೆಯಾಗದ ಕಾರಣ ಅರ್ಜಿ ಸಲ್ಲಿಕೆಯಲ್ಲೇ ಗೊಂದಲ ಏರ್ಪಟ್ಟಿದೆ.
ಇಂಜಿನಿಯರಿಂಗ್, ಕೃಷಿ, ವಿಜ್ಞಾನ, ವೆಟರಿನರಿ, ಫಾರ್ಮಸಿ ಮುಂತಾದ ವಿವಿಧ ವೃತ್ತಿಪರ ಕೋರ್ಸ್ ಗಳಿಗೆ ಪ್ರವೇಶ ಪಡೆಯಲು ಕೆಇಎ ವತಿಯಿಂದ ಸಿಇಟಿ ಪರೀಕ್ಷೆ ಎ.23 ಹಾಗೂ 24ರಂದು ನಡೆಯಲಿದ್ದು, ಇದಕ್ಕೆ ಅರ್ಜಿ ಸಲ್ಲಿಸಲು ಫೆ.17 ಕೊನೆ ದಿನಾಂಕವಾಗಿತ್ತು. ಆದರೆ ಸುಮಾರು 70-80 ಸಾವಿರ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರೀಯೆಯಲ್ಲೇ ತೊಂದರೆಯಾಗಿರುವುದರಿಂದ ಫೆಬ್ರುವರಿ 22ರವರೆಗೆ ಕೆಇಎ ವಿಸ್ತರಿಸಿದೆ.
*ಅಭ್ಯರ್ಥಿಯ ಹೆಸರಲ್ಲೇ ಪ್ರತ್ಯೇಕ ಪೋರ್ಟಲ್
ಈ ಮೊದಲು ಸಿಇಟಿ ಗೆ ಅರ್ಜಿ ಹಾಕಲು ಕೆಇಎ ವೆಬ್ ಸೈಟ್ ನಲ್ಲಿ ಲಿಂಕ್ ಆಧಾರದಲ್ಲಿ ಅಪ್ ಲೋಡ್ ಮಾಡಬೇಕಿತ್ತು. ವೆಬ್ ಹೆಚ್ಚು ವಿದ್ಯಾರ್ಥಿ ಸ್ನೇಹಿ ಆಗಿರಲಿಲ್ಲ. ಸಿಇಟಿ ಪರೀಕ್ಷೆ, ಕೌನ್ಸಿಲಿಂಗ್ ಸಮಯದಲ್ಲಿ ಸಿಇಟಿ ಅರ್ಜಿ ಸಹಿತ ಇತರ ದಾಖಲೆಗಳ ಆವಶ್ಯಕತೆ ಇರುತ್ತದೆ. ಆಗ ಪ್ರತ್ಯೇಕ ವೆಬ್ ಮೂಲಕ ಇದನ್ನು ಪಡೆಯಲು ಹೆಚ್ಚು ಸುಲಭವಾಗಿರಲಿಲ್ಲ. ಇದಕ್ಕೆ ಪರಿಹಾರವಾಗಿ ಇದೀಗ ಸಿಇಟಿ ಅಭ್ಯರ್ಥಿಯ ಹೆಸರಿನಲ್ಲಿಯೇ ಪ್ರತ್ಯೇಕ ಪೋರ್ಟಲ್ ರಚಿಸಲಾಗಿದೆ.
*ಅರ್ಜಿ ಸಲ್ಲಿಕೆಯಲ್ಲೇ ಗೊಂದಲ
ಸರ್ಕಾರಿ ಸೀಟುಗಳನ್ನು ಪಡೆಯಲು ನಿಗದಿಪಡಿಸಿರುವ ಏಳು ವರ್ಷಗಳ ವ್ಯಾಸಾಂಗದ ವಿವರಗಳನ್ನು ಖಚಿತಪಡಿಸಿಕೊಂಡು ಕ್ಲೈಮ್ ಸರ್ಟಿಫಿಕೇಟ್‌ನಲ್ಲಿ ಸಕ್ಸಸ್ ಫುಲ್ ವೆರಿಫೈಡ್ ಎಂದು ನಮೂದಿಸಲಾಗುತ್ತದೆ. ಹಾಗೂ ಸಿಇಟಿ ಅರ್ಜಿಯನ್ನು ಪೋರ್ಟಲ್ ನಲ್ಲಿ ಮುದ್ರಿಸಿಕೊಳ್ಳಲು ಅವಕಾಶವನ್ನೂ ನೀಡಲಾಗುತ್ತದೆ. ಜತೆಗೆ, ಅಂತಹ ಅಭ್ಯರ್ಥಿಯು ದಾಖಲೆ ಪರಿಶೀಲನೆಗೆ ಯಾವುದೇ ಕಚೇರಿಗೆ/ಕಾಲೇಜಿಗೆ ಹೋಗುವ ಆವಶ್ಯಕತೆ ಇನ್ನು ಮುಂದೆ ಇರುವುದಿಲ್ಲ. ಹಾಗೂ ಸಿಇಟಿ ಫಲಿತಾಂಶದ ನಂತರ ವೆರಿಫಿಕೇಶನ್ ಸ್ಲಿಪ್ ಅನ್ನು ಡೌನ್ ಲೋಡ್ ಮಾಡಿಕೊಳ್ಳಲು ಕೂಡ ಪೋರ್ಟಲ್ ನಲ್ಲೇ ಈ ಬಾರಿ ಆವಕಾಶ ನೀಡಲಾಗಿದೆ. ಆದರೆ ಅರ್ಜಿ ಅಲ್ಲಿಕೆ ವೇಳೆ ಅಭ್ಯಾರ್ಥಿಗಳ ಶೈಕ್ಷಣಿಕ ದಾಖಲೆ ಹಾಗೂ ಆಧಾರ್ ತಾಳೆಯಾಗದ ಕಾರಣ ಮತ್ತೆ ಆಧಾರ್ ದುರಸ್ತಿಗಾಗಿ ಅಲೆದಾಡುವ ಸ್ಥಿತಿ ನಿರ್ಮಾಗೊಂಡಿದೆ. ಸಧ್ಯಕ್ಕೆ ಆಧಾರ್ ದುರಸ್ತಿಗೂ ಹಲವು ದಿನ ಕಾಯುವ ಸ್ಥಿತಿಯಿರುವುದರಿಂದ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹೋರಾಟ ನಡೆಸುವ ಸ್ಥಿತಿ ಅಭ್ಯಾರ್ಥಿಗಳದ್ದು.
ತಾಳೆಯಾಗದ ಶೈಕ್ಷಣಿಕ ದಾಖಲೆ ಹಾಗೂ ಆಧಾರ್
ಸಿಇಟಿ ಅರ್ಜಿ ಸಲ್ಲಿಕೆ ವೇಳೆ ಎಸೆಸೆಲ್ಸಿ ಅಂಕಪಟ್ಟಿಯಲ್ಲಿ ಮುದ್ರಿತವಾಗಿರುವ ಅಭ್ಯರ್ಥಿಯ ಹೆಸರು, ಆಧಾರ್ ಕಾರ್ಡ್ ನಲ್ಲಿ ಮುದ್ರಿತವಾಗಿರುವ ಹೆಸರು ತಾಳೆಯಾಗುವುದು ಕಡ್ಡಾಯ. ಜತೆಗೆ ಜಾತಿ/ಆದಾಯ ಪ್ರಮಾಣ ಪ್ರಮಾಣ ಪತ್ರಗಳಲ್ಲಿ ಮುದ್ರಿತವಾಗಿರುವ ಹೆಸರು ಸಹ ತಾಳೆಯಾಗುವುದು ಕಡ್ಡಾಯ. ಹೀಗಾಗಿ ವ್ಯತ್ಯಾಸವಿದ್ದಲ್ಲಿ ಆಧಾರ್ ಸರಿಪಡಿಸುವಂತೆಯೂ ಇಲಾಖೆ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮಾಹಿತಿಯಂತೆ 2.9 ಲಕ್ಷ ಮಂದಿ ಆಧಾರ್ ಸಂಖ್ಯೆ ಮೂಲಕ ನೋಂದಣಿ ಮಾಡಿಕೊಂಡಿದ್ದು, ಹಲವರ ಆಧಾರ್ ಹಾಗೂ ಎಸೆಸೆಲ್ಸಿ ಅಂಕಪಟ್ಟಿಯ ಹೆಸರು/ದಾಖಲೆಗಳು ತಾಳೆಗಾದ ಕಾರಣ ನೋಂದಣಿಗೆ ತೊಂದರೆಯಾಗಿದೆ. ಆಧಾರ್ ದುರಸ್ತಿಗೆ ಆಧಾರ್ ಕೇಂದ್ರಗಳಿಗೆ ತೆರಳಿದರೆ ಸರ್ವರ್ ಸಮಸ್ಯೆಗಳು ಎದುರಾಗಿದೆ. 15 ದಿನವಾದರೂ ಆಧಾರ್ ದುರಸ್ತಿ ದೃಡೀಕರಣ ಬರದ ಕಾರಣ ಸಿಇಟಿ ಅರ್ಜಿ ಸಲ್ಲಿಕೆಯಲ್ಲಿ ಗೊಂದಲ ಏರ್ಪಟ್ಟಿದೆ. ಇದನ್ನರಿತ ಪ್ರಾಧಿಕಾರವು ಅರ್ಜಿ ಸಲ್ಲಿಸಲು ಒಂದು ವಾರ ಹೆಚ್ಚುವರಿ ಅವಕಾಶವನ್ನೂ ನೀಡಿದೆ.
ಅನೇಕರು ಫೆ.17ರ ಕೊನೆ ದಿನಾಂಕವನ್ನು ವಿಸ್ತರಿಸುವಂತೆ ಕೋರಿದ್ದಾರೆ, ಆ ಪ್ರಕಾರ ಅರ್ಜಿ ಸಲ್ಲಿಸಲು ಫೆ.22 ಹಾಗೂ ಶುಲ್ಕ ಪಾವತಿಗೆ ಫೆ.24ರವರೆಗೆ ದಿನಾಂಕ ವಿಸ್ತರಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ತಮ್ಮ ಅರ್ಜಿಗಳಲ್ಲಿ ಏನಾದರು ಲೋಪಗಳು/ತಪ್ಪುಗಳು ಇದ್ದಲ್ಲಿ ಸರಿಪಡಿಸಿಕೊಳ್ಳಬಹುದು. ಯಾರೂ ಗೊಂದಲ ಪಡುವ ಅಗತ್ಯ ಇಲ್ಲ.
ಸಿಇಟಿ ಅಭ್ಯರ್ಥಿಯ ಪೋರ್ಟಲ್ ಪ್ರತ್ಯೇಕವಾಗಿ ತೆರೆಯಲಾಗುವುದು. ಅಭ್ಯರ್ಥಿ ಲಾಗಿನ್ ಮಾಡಿಕೊಂಡು ಪ್ರತಿಯೊಂದು ಪ್ರತಿಗಳನ್ನು ಡೌನ್ ಲೋಡ್ ಮಾಡುವ ಮೂಲಕ ಮುದ್ರಿಸಲು ಅವಕಾಶ ನೀಡಲಾಗಿದೆ. ವಿದ್ಯಾರ್ಥಿಗಳ ಎಲ್ಲಾ ವಿವರಗಳು ಪೋರ್ಟಲ್ ನಲ್ಲಿ ಲಭ್ಯವಿರಲಿದೆ. ಅರ್ಜಿ ಸಲ್ಲಿಕೆ ವೇಳೆ ಹೆಸರು, ದಾಖಲೆಗಳ ವ್ಯತ್ಯಾಸವಿದ್ದಲ್ಲಿ ಆಧಾರ್ ಸರಿಪಡಿಸುವಂತೆಯೂ ಇಲಾಯಿಂದೆ ವಿದ್ಯಾರ್ಥಿಗಳಿಗೆ ಸೂಚಿಸಲಾಗಿದೆ.