ಪುತ್ತೂರು ಸಹಾಯಕ ಆಯುಕ್ತರ ಕಚೇರಿ ಮುಂಭಾಗ ರೈತ ಮುಖಂಡರು ಪ್ರತಿಭಟನೆ ನಡೆಸಿದರು.
- ರೈತ ಮುಖಂಡರಿಂದ ಪ್ರತಿಭಟನೆ
- ಸುಳ್ಳು ಪ್ರಕರಣ ದಾಖಲು ಆರೋಪ
ಪುತ್ತೂರು: ಸುಬ್ರಹ್ಮಣ್ಯ ಬಳ್ಪದಿಂದ ಪಿರಿಯಾಪಟ್ಟಣದ ಚೆನ್ನಂಗೆರೆ ಭಾಗಕ್ಕೆ ಜ.೧೦ರಂದು ಹೈನುಗಾರಿಕೆ ಉದ್ದೇಶಕ್ಕೆ ಗೋವುಗಳನ್ನು ಕೊಂಡೊಯ್ಯುತ್ತಿದ್ದ ಸಂದರ್ಭ ಸುಬ್ರಹ್ಮಣ್ಯ ಠಾಣೆ ಪೊಲೀಸರು ಸರಿಯಾಗಿ ವಿಚಾರಣೆ ನಡೆಸದೆ ಗೋಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದು, ಪೊಲೀಸ್ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಹಾಗೂ ಗೋವುಗಳನ್ನು ಹಸ್ತಾಂತರಿಸಬೇಕು ಎಂದು ರೈತ ಸಂಘದ ಮುಖಂಡರು ಸಹಾಯಕ ಆಯುಕ್ತರ ಕಚೇರಿ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು.
ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗೀಸ್ ಕಚೇರಿಯಲ್ಲಿಲ್ಲದ ಕಾರಣ ಕೆಲಕಾಲ ಗೊಂದಲ ಏರ್ಪಟ್ಟಿತು. ಪುತ್ತೂರು ತಹಸೀಲ್ದಾರ್ ಎಸ್.ಬಿ ಕೂಡಲಗಿ, ಪುತ್ತೂರು ಪೊಲೀಸ್ ನಿರೀಕ್ಷಕ ಜಾನ್ಸನ್ ಡಿಸೋಜ ಪ್ರತಿಭಟನಾ ನಿರತರ ಜತೆಗೆ ಮಾತುಕತೆ ನಡೆಸಿದರು. ಬಳಿಕ ಕಚೇರಿಗೆ ಆಗಮಿಸಿದ ಎಸಿ, ರೈತರ ಜತೆ ಮಾತುಕತೆ ನಡೆಸಿದರು. ಗೋಶಾಲೆಗೆ ಬಿಟ್ಟ ಗೋವುಗಳನ್ನು ಪಶುವೈದ್ಯರಿಂದ ತಪಾಸಣೆ ಮಾಡಿಸಿ ವರದಿ ನೀಡಬೇಕು, ಗೋವು ಹಾಗೂ ವಾಹನ ಬಿಡುಗಡೆಗೆ ತ್ವರಿತ ಕ್ರಮ ಕೈಗೊಳ್ಳಬೇಕು ಎಂದು ರೈತರು ಬೇಡಿಕೆ ಇಟ್ಟರು. ಪುತ್ತೂರು ಪೊಲೀಸ್ ಉಪಅಧೀಕ್ಷಕ ಅರುಣ್ ನಾಗೇಗೌಡ ಹಾಜರಿದ್ದು, ಕ್ರಮದ ಭರವಸೆ ನೀಡಿದರು.
ರೈತ ಸಂಘ ರಾಜ್ಯಾಧ್ಯಕ್ಷ ಮಂಜೇಗೌಡ ಅರಳಾಪುರ, ಯುವ ಘಟಕ ರಾಜ್ಯಾಧ್ಯಕ್ಷ ಬಿ.ಕೆ.ವಿನೋದ್ ಗೌಡ, ಮಹಿಳಾ ಘಟಕದ ಅನ್ನಪೂರ್ಣ, ರಾಜೇಶ್ವರಿ ಯಲಹಂಕ, ಜಯಲಕ್ಷ್ಮೀ ಹುಣಸೂರು, ಪ್ರಮುಖರಾದ ಕೃಷ್ಣೇಗೌಡ, ಸೋಮಶೇಖರ, ಚಂದ್ರಶೇಖರ, ಮಂಜೇಗೌಡ ಬಡಕನ ಹಳ್ಳಿ, ಅಜಿತ್, ಲೋಕೇಶ್ ಆರಾಧ್ಯಾ, ಶೇಖರ ಮತ್ತಿತರರು ಹಾಜರಿದ್ದರು.
ಎರಡು ಪ್ರಕರಣ ದಾಖಲು
ಪಿರಿಯಾಪಟ್ಟಣ ಮೂಲದ ಶಿವಣ್ಣ(೪೪) ಎಂಬಾತ ಪರವಾನಗಿ ಪಡೆಯದೆ ಗೋವುಗಳನ್ನು ಪಿಕಪ್‌ನಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದರು. ಪಿಕಪ್‌ನಲ್ಲಿದ್ದ ಸಾಲಿಗ್ರಾಮ ನಿವಾಸಿ ಸುನೀಲ್(೩೦) ಎಂಬಾತ ಮಾಂಸ ಮಾಡುವರಿಗೆ ಮಾರಾಟಕ್ಕೆ ಗೋವುಗಳನ್ನು ತೆಗೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದು, ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ದನ ಹಾಗೂ ಒಂದು ಕರುವನ್ನು ಸಾಗಾಟ ಮಾಡುತ್ತಿದ್ದ ಸಂದರ್ಭ ಕುಲ್ಕುಂದದಲ್ಲಿ ಇಬ್ಬರು ವಾಹನ ಅಡ್ಡಗಟ್ಟಿ ಅವಾಚ್ಯವಾಗಿ ಬೈದಿದ್ದಲ್ಲದೆ, ಜೀವಬೆದರಿಗೆ ಹಾಕಿರುವ ಬಗ್ಗೆ ಶಿವಣ್ಣ ನೀಡಿದ ದೂರಿನಂತೆ ಮತ್ತೊಂದು ಪ್ರಕರಣ ದಾಖಲಾಗಿದೆ ಎಂದು ಸುಬ್ರಹ್ಮಣ್ಯ ಠಾಣೆ ಉಪನಿರೀಕ್ಷಕ ಆಂಜನೇಯ ರೆಡ್ಡಿ ಮಾಹಿತಿ ನೀಡಿದರು.
ಗೋವುಗಳನ್ನು ತಪಾಸಣೆ ನಡೆಸಿ ವರದಿ ನೀಡಲು ಪಶು ಸಂಗೋಪನಾ ಇಲಾಖೆಗೆ ಸೂಚಿಸಲಾಗಿದೆ. ಪರಿಶೀಲನೆ ಸಂದರ್ಭ ಸ್ಥಳದಲ್ಲಿ ರೈತರು ಇರಬೇಕೆಂಬ ಬೇಡಿಕೆಯನ್ನು ಪುರಸ್ಕರಿಸಲಾಗಿದೆ. ಪ್ರಕರಣ ದಾಖಲಾಗಿರುವ ಕಾರಣ ನ್ಯಾಯಾಲಯದ ನಿಯಮದ ಪ್ರಕಾರ ಗೋವುಗಳನ್ನು ಹಸ್ತಾಂತರ ಮಾಡಬೇಕಿದೆ.
ಗೋವುಗಳನ್ನು ಕಸಾಯಿಖಾನೆಗೆ ತೆಗೆದುಕೊಂಡು ಹೋಗುವುದಾದರೆ ರೈತರ ಮೇಲೆ ಪ್ರಕರಣ ದಾಖಲಿಸಲು ಯಾವುದೇ ಅಭ್ಯಂತರವಿಲ್ಲ. ಗಬ್ಬದ ಹಸುವಿಗೆ ಸರಿಯಾದ ಆರೈಕೆಯಾಗಬೇಕು. ಮೂರು ನಾಲ್ಕು ದಿನಗಳಿಂದ ದನಗಳು ಠಾಣೆಯಲ್ಲೇ ಇವೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ರಾಜ್ಯದ ನಾಯಕರೆಲ್ಲರೂ ಆಗಮಿಸಿದ್ದಾರೆ.