ಮಂಗಳೂರು: ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸುವ ಉದ್ದೇಶದಿಂದ ಸುಳ್ಳು ಮಾಹಿತಿಯೊಂದಿಗೆ ಫಾರಂ ನಂ.7 ಅರ್ಜಿಗಳನ್ನು ಸಲ್ಲಿಸಿ ಚುನಾವಣಾ ಪ್ರಾಧಿಕಾರವನ್ನು ತಪ್ಪುದಾರಿಗೆಳೆಯಲು ಯತ್ನಿಸಿದ ಆರೋಪದಡಿ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೂಡುಶೆಡ್ಡೆಯ ಎದುರುಪದವು ನಿವಾಸಿ ಅಬ್ದುಲ್ ಲತೀಫ್ ಅವರು ನೀಡಿದ ದೂರಿನ ಪ್ರಕಾರ, ತಾವು ಹುಟ್ಟಿನಿಂದಲೂ ಎದುರುಪದವಿನಲ್ಲಿ ವಾಸವಾಗಿದ್ದು, ಅಲ್ಲಿ ಸ್ವಂತ ಮನೆ ಹೊಂದಿದ್ದೇವೆ. ಉದ್ಯೋಗದ ನಿಮಿತ್ತ ಕಳೆದ ಸುಮಾರು ನಾಲ್ಕು ತಿಂಗಳಿಂದ ಕುಟುಂಬ ಸಮೇತ ಕುಳೂರಿನಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರೂ, ತಮ್ಮ ಮೂಲ ನಿವಾಸ ಹಾಗೂ ಮತದಾರರ ನೋಂದಣಿ ಮೂಡುಶೆಡ್ಡೆಯಲ್ಲಿಯೇ ಇದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತಾವು 2023ರ ಮೂಲ್ಕಿಮೂಡುಬಿದ್ರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಮೂಡುಶೆಡ್ಡೆಯಲ್ಲಿ ಮತ ಚಲಾಯಿಸಿದ್ದಾಗಿ ಹಾಗೂ ಇತ್ತೀಚಿನ ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಮ್ಮ ಮತ್ತು ಕುಟುಂಬದ ಸದಸ್ಯರ ಹೆಸರುಗಳ ಮ್ಯಾಪಿಂಗ್ ಪೂರ್ಣಗೊಂಡು ಕರಡು ಮತದಾರರ ಪಟ್ಟಿಯಲ್ಲಿಯೂ ಹೆಸರುಗಳಿದ್ದವು ಎಂದು ಅವರು ತಿಳಿಸಿದ್ದಾರೆ.
ಆದರೆ ಯಾವುದೇ ನೋಟಿಸ್ ನೀಡದೆ, ತಮ್ಮ ಹಾಗೂ ಕುಟುಂಬದ ಸದಸ್ಯರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತೆಗೆದುಹಾಕುವ ಉದ್ದೇಶದಿಂದ ಕಿಶನ್ ಎಂಬವರು ಫಾರಂ ನಂ.7 ಮೂಲಕ ಸುಳ್ಳು ಮಾಹಿತಿ ನೀಡಿ ಅರ್ಜಿ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದೇ ರೀತಿಯಲ್ಲಿ ಎದುರುಪದವು ಮತ್ತು ಶಿವನಗರ ಬೂತ್‌ಗಳಿಗೆ ಸೇರಿದ ಒಟ್ಟು 68 ಅರ್ಹ ಮತದಾರರ ಹೆಸರುಗಳನ್ನು ಅಳಿಸುವಂತೆ ಅರ್ಜಿಗಳನ್ನು ಸಲ್ಲಿಸಲಾಗಿದ್ದು, ಈ ಮೂಲಕ ಚುನಾವಣಾ ಪ್ರಾಧಿಕಾರವನ್ನು ತಪ್ಪುದಾರಿಗೆಳೆಯಲು ಪ್ರಯತ್ನಿಸಲಾಗಿದೆ.
ಇದೇ ಆರೋಪಕ್ಕೆ ಸಂಬಂಧಿಸಿದಂತೆ ಅನೀಶಾ ಎಂಬುವವರೂ ಕಾವೂರು ಠಾಣೆಗೆ ದೂರು ನೀಡಿದ್ದಾರೆ. 2021ರ ಅಕ್ಟೋಬರ್‌ನಲ್ಲಿ ವಿವಾಹವಾದ ಬಳಿಕ, ಪತಿ ಉದ್ಯೋಗದ ನಿಮಿತ್ತ ಸೌದಿ ಅರೇಬಿಯಾದಲ್ಲಿರುವುದರಿಂದ ತಾವು ಮೂಡುಶೆಡ್ಡೆಯ ಎದುರುಪದವಿನಲ್ಲಿರುವ ತಾಯಿಯ ಮನೆಯಲ್ಲೇ ವಾಸಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ. ತಾವು ಅರ್ಹ ಮತದಾರರಾಗಿದ್ದು, 2023ರ ವಿಧಾನಸಭಾ ಚುನಾವಣೆಯಲ್ಲಿ ಮೂಡುಶೆಡ್ಡೆಯಲ್ಲಿ ಮತ ಚಲಾಯಿಸಿದ್ದೇವೆ.
ಎಸ್‌ಐಆರ್ ಪ್ರಕ್ರಿಯೆಯಲ್ಲಿ ತಮ್ಮ ಹೆಸರು ಮ್ಯಾಪಿಂಗ್ ಆಗಿ ಕರಡು ಪಟ್ಟಿಯಲ್ಲಿದ್ದರೂ, ಯಾವುದೇ ನೋಟಿಸ್ ನೀಡದೆ ಫಾರಂ ನಂ.7 ಮೂಲಕ ತಮ್ಮ ಹೆಸರನ್ನು ಅಳಿಸಲು ಕಿಶನ್ ಎಂಬವರು ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ಅನೀಶಾ ಆರೋಪಿಸಿದ್ದಾರೆ. ತಮ್ಮ ತಂಗಿ ಆಯಿಶಾ ಭಾನು ಸೇರಿದಂತೆ ಇನ್ನೂ 66 ಮತದಾರರ ಹೆಸರುಗಳನ್ನು ಅಳಿಸುವಂತೆ ಅರ್ಜಿ ಸಲ್ಲಿಸಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎರಡೂ ದೂರುಗಳ ಆಧಾರದ ಮೇಲೆ ಕಿಶನ್, ರಿತೇಶ್, ಯುವರಾಜ್ ಹಾಗೂ ಶಶಿಕಲಾ ಬಿ. ಅವರ ವಿರುದ್ಧ
ಕಾವೂರು ಪೊಲೀಸರು ದೂರುಗಳನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.