ಮಂಗಳೂರು: ಅಸೌಖ್ಯಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿ ಅಲ್ಲಿಂದ ಬಿಡುಗಡೆಗೊಂಡು ವಾಪಾಸು ಜೈಲಿಗೆ ಬರುವಾಗ ಗುದದ್ವಾರದಲ್ಲಿ ಮೊಬೈಲ್ ಇಟ್ಟುಕೊಂಡು ಬಂದಿದ್ದ ಕೈದಿಯ ವಿರುದ್ಧ ಪ್ರಕರಣ ದಾಖಲಾಗಿದೆ.
ಮೊಹಮ್ಮದ್ ತೋಹಿದ್ ಮೊಬೈಲ್ ಇಟ್ಟುಕೊಂಡು ಬಂದ ಆರೋಪಿ.
ಎ.24ರಂದು ತೋಹಿದ್ ನನ್ನು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಿಸಲಾಗಿತ್ತು. ಎ.29ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಸಂಜೆ 5.15ರ ವೇಳೆ ಕೊಡಿಯಾಲಬೈಲಿನ ಜಿಲ್ಲಾ ಕಾರಾಗೃಹಕ್ಕೆ ಕರೆ ತರಲಾಗಿದೆ. ಅಲ್ಲಿ ಕರ್ತವ್ಯದಲ್ಲಿದ್ದ ಕೆಎಸ್‌ಐಎಸ್‌ಎಫ್ ಸಿಬಂದಿ ನಾಗರಾಜ್ ಆರ್. ನಾಯಕ ಮತ್ತು ರೇವಣ್ಣ ಅವರು ತಪಾಸಣ ಯಂತ್ರದ ಮೂಲಕ ತಪಾಸಣೆ ಮಾಡಿದಾಗ ಆತನ ಗುದದ್ವಾರದ ಬಳಿ ಶಬ್ದ ಕೇಳಿ ಬಂದಿದೆ.
ವಿಚಾರಿಸಿದಾಗ ಗುದದ್ವಾರದಲ್ಲಿ ಮೊಬೈಲ್ ಇಟ್ಟು ಕೊಂಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆತನನ್ನು ಮತ್ತೆ ಆಸ್ಪತ್ರೆಗೆ ಕಳುಹಿಸಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಈ ವೇಳೆ ಕೀ ಪ್ಯಾಡ್ ಮೊಬೈಲ್ ಪತ್ತೆಯಾಗಿದ್ದು, ವೈದ್ಯರು ಹೊರಗೆ ತೆಗೆದಿದ್ದಾರೆ. ಜೈಲು ಅಧೀಕ್ಷಕ ಶರಣಬಸಪ್ಪ ಅವರು ನೀಡಿದ ದೂರಿನಂತೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.